‘ಸ್ಟಿಂಗ್ ವಿಡಿಯೋ’ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಸಿಬಿಯಿಂದ ‘ಕ್ಲೀನ್ ಚಿಟ್’

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಹಾಗೂ ಸೌಂಡು ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸೈಬರ್ ‘ಸ್ಟಿಂಗ್ ಆಪರೇಷನ್ ವಿಡಿಯೋ’ ಪ್ರಕರಣದಲ್ಲಿ ಸಿಸಿಬಿ (CCB) ಸೈಬರ್ ಪೊಲೀಸರು ಅತ್ಯಂತ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟಿಂಗ್ ವಿಡಿಯೋದಲ್ಲಿ ಬಿಂಬಿಸಲಾಗಿರುವ ಎಲ್ಲಾ ವಿಚಾರಗಳು ಕಟ್ಟುಕಥೆ ಮತ್ತು ದುರುದ್ದೇಶಪೂರಿತ ಸೃಷ್ಟಿ ಎಂದು ಸಿಸಿಬಿ ತನಿಖೆಯಲ್ಲಿ ಸ್ಪಷ್ಟವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ‘ಕ್ಲೀನ್ ಚಿಟ್‘ ದೊರೆತಿದೆ. ಈ ಕುರಿತು ಬೆಂಗಳೂರು ಸಿಸಿಬಿ ವಿಭಾಗವು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ ಪ್ರಕರಣದ ಸಂಪೂರ್ಣ ವಿವರಗಳನ್ನು ಬಿಚ್ಚಿಟ್ಟಿದೆ.

ಸಿಸಿಬಿ ಅಧಿಕೃತ ಪ್ರಕಟಣೆಯಲ್ಲಿ ಏನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಸುದೀರ್ಘ ಹಾಗೂ ಸುಸಜ್ಜಿತವಾಗಿ ಪರಿಶೀಲಿಸಲಾಗಿದ್ದು, ಈ ಕೆಳಗಿನ ಪ್ರಮುಖ ಸಂಗತಿಗಳನ್ನು ಸಿಸಿಬಿ ದೃಢಪಡಿಸಿದೆ. ವಿಡಿಯೋದಲ್ಲಿ ಉಲ್ಲೇಖಿಸಲಾದ ಲೈಂಗಿಕ ದೌರ್ಜನ್ಯದ ಆರೋಪಗಳು ಸಂಪೂರ್ಣವಾಗಿ ಕಟ್ಟುಕಥೆಯಾಗಿದ್ದು, ರಾಜಕೀಯ ದುರುದ್ದೇಶದಿಂದ ಸೃಷ್ಟಿಸಲಾದ ನಿರೂಪಣೆಯಾಗಿದೆ. ಸಾಕ್ಷಾಧಾರಗಳು ಹಾಗೂ ವಿಚಾರಣೆಗೆ ಒಳಪಟ್ಟ ವ್ಯಕ್ತಿಗಳ ಹೇಳಿಕೆಗಳಲ್ಲಿ ಯಾವುದೇ ಅಕ್ರಮ ಅಥವಾ ಲೈಂಗಿಕ ಕಿರುಕುಳ ನಡೆದಿದೆ ಎಂಬುದು ಸಾಬೀತಾಗಿಲ್ಲ. ವಿಡಿಯೋದಲ್ಲಿ ಕಂಡುಬಂದ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಿ ಒಂದಕ್ಕಿಂತ ಹೆಚ್ಚು ಬಾರಿ ಸಮಗ್ರ ವಿಚಾರಣೆಗೊಳಪಡಿಸಲಾಗಿದೆ. ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡಾಗ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಮೇಲ್ನೋಟಕ್ಕೇ ಸ್ಪಷ್ಟವಾಗಿದೆ.

ಫೋರೆನ್ಸಿಕ್ (FSL) ಪರೀಕ್ಷೆಗೆ ಮೊಬೈಲ್ – 12 ವರ್ಷಗಳ ನಂತರದ ಚಿತ್ರೀಕರಣ!

ವಿಡಿಯೋ ಚಿತ್ರೀಕರಿಸಲು ಬಳಸಲಾಗಿದ್ದ ಮೂಲ ಮೊಬೈಲ್ ಫೋನ್ ಅನ್ನು ಸಿಸಿಬಿ ಪೊಲೀಸರು ಈಗಾಗಲೇ ಜಪ್ತಿ ಮಾಡಿದ್ದಾರೆ.  ವಿಡಿಯೋದ ನೈಜತೆ, ಎಡಿಟಿಂಗ್ ಹಾಗೂ ತಾಂತ್ರಿಕ ಸತ್ಯಾಸತ್ಯತೆ ತಿಳಿಯಲು ಮೊಬೈಲ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ (FSL) ರವಾನಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ, 2011ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಬರೋಬ್ಬರಿ 12 ವರ್ಷಗಳ ನಂತರ, ಅಂದರೆ 2023ರಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. 2023ರಿಂದ 2026ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನೆಟ್‌ನಲ್ಲಿ ಪ್ರಸಾರವಾಗುವವರೆಗೂ ಈ ವಿಡಿಯೋ ಯಾರ ವಶದಲ್ಲಿತ್ತು ಮತ್ತು ಯಾರಿಂದ ಯಾರಿಗೆ ವರ್ಗಾವಣೆಯಾಯಿತು ಎಂಬ ಹಸ್ತಾಂತರದ ಲಿಂಕ್‌ಗಳನ್ನು ಪೊಲೀಸರು ಶೋಧಿಸುತ್ತಿದ್ದಾರೆ.

ಇದನ್ನೂ ಓದಿ: ಮುಂದಿನ ಚುನಾವಣೆ ಸಿದ್ಧರಾಮಯ್ಯ ಅವರ ನೇತೃತ್ವದಲ್ಲೇ ನಡೆಯಲಿದೆ: ಜಮೀರ್

ದೆಹಲಿಯ ಪ್ರಭಾವಿ ರಾಜಕಾರಣಿಗಳ ಕನೆಕ್ಷನ್? VPN ಬಳಸಿ ವೈರಲ್:

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN), ನಕಲಿ ಐಪಿ ಅಡ್ರೆಸ್ ಹಾಗೂ ಸುಧಾರಿತ ಡಿಜಿಟಲ್ ತಂತ್ರಗಳನ್ನು ಬಳಸಿ ತಮ್ಮ ಸ್ಥಳವನ್ನು ಮರೆಮಾಚಲಾಗಿತ್ತು. ಪ್ರಸ್ತುತ ಬಂಧಿತನಾಗಿರುವ ಆರೋಪಿಯು ಸ್ವತಂತ್ರ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಆತನಿಗೆ ನವದೆಹಲಿಯಲ್ಲಿ ನೆಲೆಸಿರುವ ಪ್ರಭಾವಿ ರಾಜಕೀಯ ಸಂಪರ್ಕಗಳಿರುವ ವ್ಯಕ್ತಿಗಳೊಂದಿಗೆ ನೆಂಟಸ್ತಿಕೆ ಇರುವುದು ಕಂಡುಬಂದಿದೆ.  ರಾಜ್ಯದ ಜವಾಬ್ದಾರಿಯುತ ನಾಯಕರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತಂದು ಸಾರ್ವಜನಿಕ ಅಭಿಪ್ರಾಯವನ್ನು ತಪ್ಪು ದಾರಿಗೆ ಎಳೆಯಲು ಯೋಜಿತವಾಗಿ ಈ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ ಎಂದು ಸಿಸಿಬಿ ಸ್ಪಷ್ಟಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ