ಲೋಕಾ ಬಲೆಗೆ ಬಿದ್ದಿದ್ದ ಅಫಜಲಪುರ ಮಾಜಿ ತಹಶೀಲ್ದಾರ್‌ಗೆ ಜೈಲು ಭಾಗ್ಯ: ಶಶಿಕಲಾ ಪಾದಗಟ್ಟಿಗೆ 4 ವರ್ಷ ಕಠಿಣ ಶಿಕ್ಷೆ, 20 ಸಾವಿರ ದಂಡ

ಕಲಬುರಗಿ: ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಅಫಜಲಪುರ ತಾಲೂಕಿನ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯವು ಭಾರಿ ಶಾಕ್ ನೀಡಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಾಜಿ ತಹಶೀಲ್ದಾರ್‌ಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂಪಾಯಿ ದಂಡ ವಿಧಿಸಿ ಇವತ್ತು (ಜುಲೈ 10) ಮಹತ್ವದ ಆದೇಶ ಹೊರಡಿಸಿದೆ.

ಸಾರ್ವಜನಿಕರ ಕೆಲಸ ಮಾಡಿಕೊಡಲು ಸತಾಯಿಸಿ ಹಣ ಪೀಕುತ್ತಿದ್ದ ಅಧಿಕಾರಿಗೆ ಕೊನೆಗೂ ಕಾನೂನಿನ ಬಿಸಿ ತಟ್ಟಿದ್ದು, ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ನಡುಕ ಹುಟ್ಟಿಸಿದೆ.

ಪ್ರಕರಣದ ಹಿನ್ನೆಲೆಯ ಪ್ರಕಾರ, ಶಶಿಕಲಾ ಪಾದಗಟ್ಟಿ ಅವರು 2017ರಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅಫಜಲಪುರ ತಾಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಶಿವಲಿಂಗಯ್ಯ ಎಂಬುವವರ ಕೆಲಸ ಮಾಡಿಕೊಡಲು ತಹಶೀಲ್ದಾರ್ ಶಶಿಕಲಾ ಅವರು ಬರೋಬ್ಬರಿ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಅಧಿಕಾರಿಯ ಲಂಚಾವತಾರದಿಂದ ಬೇಸತ್ತಿದ್ದ ಶಿವಲಿಂಗಯ್ಯ ಹಾಗೂ ಸ್ಥಳೀಯ ಸಾರ್ವಜನಿಕರು ಈ ಕುರಿತು ಕಲಬುರಗಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನ ಅನ್ವಯ 2017ರಲ್ಲಿ ಲೋಕಾಯುಕ್ತ ಪೊಲೀಸರು ಕರಜಗಿ ನಾಡ ಕಚೇರಿಯ ಮೇಲೆ ಮಿಂಚಿನ ದಾಳಿ (Trap) ನಡೆಸಿದ್ದರು. ಶಿವಲಿಂಗಯ್ಯ ಅವರಿಂದ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರು 1 ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಹಣದ ಸಮೇತ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು. ತದನಂತರ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.

ಇದನ್ನೂ ಓದಿ:ಈಶ್ವರಪ್ಪ ಕುಟುಂಬದ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಕೇಸ್: ಲೋಕಾಯುಕ್ತ ‘ಬಿ’ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವಕೀಲ ವಿನೋದ್

ಸುದೀರ್ಘ ವರ್ಷಗಳ ಕಾಲ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣದ ಸಾಕ್ಷ್ಯಾಧಾರಗಳ ವಿಚಾರಣೆ ನಡೆಯಿತು. ಲೋಕಾಯುಕ್ತ ಪೊಲೀಸರು ಸಲ್ಲಿಕೆ ಮಾಡಿದ್ದ ಭದ್ರ ದಾಖಲೆಗಳು ಹಾಗೂ ಸಾಕ್ಷಿಗಳನ್ನು ಪುರಸ್ಕರಿಸಿದ ನ್ಯಾಯಾಧೀಶರು, ಶಶಿಕಲಾ ಪಾದಗಟ್ಟಿ ಅವರ ಮೇಲಿನ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಅಪರಾಧಿಗೆ 4 ವರ್ಷ ಜೈಲು ಮತ್ತು 20 ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *