ಮಂಗಳೂರಿನಲ್ಲಿ ಭೀಕರ ಘಟನೆ: ನೈತಿಕ ಪೊಲೀಸ್‌ಗಿರಿ ಕೇಸ್‌ಗೆ ಹೆದರಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಮಂಗಳೂರು: ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಪೊಲೀಸ್ ದೂರು ದಾಖಲಾದ ಹಿನ್ನೆಲೆಯಲ್ಲಿ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಹೊರವಲಯದ ಹೊಸಬೆಟ್ಟು ಎಂಬಲ್ಲಿ ನಡೆದಿದೆ ಮೃತರನ್ನು ಹೊಸಬೆಟ್ಟು ನಿವಾಸಿ ಸೋಮನಾಥ್ (48) ಎಂದು ಗುರುತಿಸಲಾಗಿದೆ. ಅಕ್ಟೋಬರ್ 25ರ ರಾತ್ರಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಂಗಳೂರು ಹೊರವಲಯದ ಹೊಸಬೆಟ್ಟು ಬೀಚ್ ಸಮೀಪ ಅಕ್ಟೋಬರ್ 25ರ ರಾತ್ರಿ ಸಂಚರಿಸುತ್ತಿದ್ದ ದಂಪತಿಯನ್ನು ಸೋಮನಾಥ್ ಹಾಗೂ ಅವರ ಸ್ನೇಹಿತರ ತಂಡ ತಡೆದು, ನಿಂದಿಸಿ ನೈತಿಕ ಪೊಲೀಸ್‌ಗಿರಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ಆಕ್ರೋಶಗೊಂಡಿದ್ದ ದಂಪತಿ ತಕ್ಷಣವೇ ಸುರತ್ಕಲ್ ಪೊಲೀಸ್ ಠಾಣೆಗೆ ತೆರಳಿ ಸೋಮನಾಥ್ ಮತ್ತು ಅವರ ಸಹಚರರ ವಿರುದ್ಧ ಅಧಿಕೃತ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್ ಠಾಣೆ ಪೊಲೀಸರು, ಆರೋಪಿ ಸೋಮನಾಥ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕಾನೂನುಬದ್ಧ ನೋಟಿಸ್ ನೀಡಿ ಕಳುಹಿಸಿದ್ದರು. ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿ, ನೋಟಿಸ್ ಜಾರಿಯಾಗುತ್ತಿದ್ದಂತೆ ಸೋಮನಾಥ್ ತೀವ್ರ ಮನನೊಂದಿದ್ದರು ಎನ್ನಲಾಗಿದೆ. ಇಂದು (ಅಕ್ಟೋಬರ್ 27) ಬೆಳಿಗ್ಗೆ ಮನೆಯಲ್ಲಿದ್ದ ಕುಟುಂಬಸ್ಥರು ಹೊರಗಡೆ ತೆರಳಿದ್ದಾಗ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಸೋಮನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸ್ಕೂಟರ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣವಾದ ಘಟನೆಗೆ ಟ್ವಿಸ್ಟ್

ಸ್ಥಳಕ್ಕೆ ಧಾವಿಸಿರುವ ಸುರತ್ಕಲ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ