ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ: ಬರೋಬ್ಬರಿ 99.32 ಲಕ್ಷ ಮತಗಳು ಡಿಲೀಟ್‌

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌ – SIR) ಪ್ರಕ್ರಿಯೆಯು ಪೂರ್ಣಗೊಂಡಿದ್ದು, ರಾಜ್ಯ ಚುನಾವಣಾ ಆಯೋಗವು ಇಂದು (ಅಕ್ಟೋಬರ್ 27) ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ನೂತನ ಪಟ್ಟಿಯಿಂದ ಬರೋಬ್ಬರಿ 99.32 ಲಕ್ಷ ಮತದಾರರ ಹೆಸರುಗಳು ಹೊರಗುಳಿದಿದ್ದು, ರಾಜ್ಯದ ಒಟ್ಟು ಮತದಾರರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಸಂಖ್ಯೆಯು, ಇದೀಗ 99.32 ಲಕ್ಷ ಹೆಸರುಗಳು ಡಿಲೀಟ್ ಆದ ಕಾರಣ 4.55 ಕೋಟಿಗೆ ಇಳಿಕೆಯಾಗಿದೆ. ಈ ಬೃಹತ್ ಪ್ರಮಾಣದ ಇಳಿಕೆಯು ರಾಜ್ಯದ ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು!:

ಜೂನ್ 30 ರಂದು ಆರಂಭವಾಗಿದ್ದ ಎಸ್‌ಐಆರ್‌ (SIR) ಪ್ರಕ್ರಿಯೆಯಡಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಷ್ಕೃತ ಅಂತಿಮ ಪಟ್ಟಿಯ ಪ್ರಮುಖ ಮುಖ್ಯಾಂಶಗಳು ಹೀಗಿವೆ:

  • ಮಹಿಳಾ ಮತದಾರರ ಪ್ರಾಬಲ್ಯ: ಅಂತಿಮ ಪಟ್ಟಿಯಲ್ಲಿ ಸುಮಾರು 2.29 ಕೋಟಿ ಮಹಿಳಾ ಮತದಾರರು ಹಾಗೂ 2.25 ಕೋಟಿ ಪುರುಷ ಮತದಾರರು ಇದ್ದು, ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ.

  • ಯುವ & ತೃತೀಯ ಲಿಂಗಿ ಮತದಾರರು: ರಾಜ್ಯದಲ್ಲಿ 18-19ರ ವಯೋಮಾನದ 6.83 ಲಕ್ಷಕ್ಕೂ ಹೆಚ್ಚು ಹೊಸ ಯುವ ಮತದಾರರಿದ್ದರೆ, 2,841 ತೃತೀಯ ಲಿಂಗಿ ಮತದಾರರು ನೋಂದಾಯಿತರಾಗಿದ್ದಾರೆ.

1 ಕೋಟಿಗೂ ಹೆಚ್ಚು ASDD ಮತದಾರರು – 43.82 ಲಕ್ಷ ಜನರಿಗೆ ನೋಟಿಸ್:

  • ASDD ಪಟ್ಟಿಗೆ ಭಾರಿ ಸೇರ್ಪಡೆ: ಬಿಎಲ್‌ಒ (BLO)ಗಳ ಪರಿಶೀಲನೆ ವೇಳೆ ಗೈರುಹಾಜರಿ (Absent), ಸ್ಥಳಾಂತರಗೊಂಡ (Shifted), ಮೃತಪಟ್ಟ (Dead) ಹಾಗೂ ನಕಲಿ (Duplicate) ಅಂದರೆ ‘ASDD’ ಪಟ್ಟಿಗೆ ಬರೋಬ್ಬರಿ 1 ಕೋಟಿಗೂ ಹೆಚ್ಚು ಮತದಾರರನ್ನು ಸೇರಿಸಲಾಗಿತ್ತು.

  • 43.82 ಲಕ್ಷ ನೋಟಿಸ್ ಜಾರಿ: ಎಸ್‌ಐಆರ್‌ ನಮೂನೆಗಳಲ್ಲಿನ ಮಾಹಿತಿ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಒಟ್ಟು 43.82 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿತ್ತು.

  • 10.42 ಲಕ್ಷ ಹೊಸ ಅರ್ಜಿ ಸಲ್ಲಿಕೆ: ಈ ನಡುವೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಚುನಾವಣಾ ಆಯೋಗಕ್ಕೆ 10.42 ಲಕ್ಷ ಫಾರ್ಮ್-6 (Form 6) ಅರ್ಜಿಗಳು ಸಲ್ಲಿಕೆಯಾಗಿವೆ.

ಇದನ್ನೂ ಓದಿ: 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ‘SIR’ ವಿಷಯ ಸೇರ್ಪಡೆ; ರಾಜಕೀಯ ಜಟಾಪಟಿ ನಡುವೆ ತಜ್ಞರ ನಿರ್ಧಾರ

ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಇದು ದೊಡ್ಡ ಮಟ್ಟದ ಚರ್ಚೆಗೆ ಹಾದಿ ಮಾಡಿಕೊಡುವ ಸಾಧ್ಯತೆಯಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ