ಕುಂದಾಪುರದಲ್ಲಿ ಕರುಣಾಜನಕ ದುರಂತ: ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು 7ನೇ ತರಗತಿಯ ವಿದ್ಯಾರ್ಥಿನಿಯರು ಕೆರೆಯಲ್ಲಿ ಮುಳುಗಿ ದುರ್ಮರಣ

ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಭೀಕರ ಹಾಗೂ ಕರುಣಾಜನಕ ದುರಂತವೊಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಡು ಗ್ರಾಮದ ಕೊಪ್ಪರಿಗೆ ಗುಡ್ಡೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತ ಬಾಲಕಿಯರನ್ನು ಚಂದ್ರು ಬಸವರಾಜ್ ವೇಷಗಾರ ಹಾಗೂ ಮಂಜಕಾಳು ದಂಪತಿಯ ಪುತ್ರಿ ಸುನೀತ (13) ಮತ್ತು ದಿವಂಗತ ಮಂಜುನಾಥ್ ಹಾಗೂ ಶಾರದಾ ದಂಪತಿಯ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮುದ್ದಿನಕೊಪ್ಪ ಮೂಲದ ಈ ಕುಟುಂಬಗಳು ಮುಳ್ಳಿಕಟ್ಟೆಯ ಗುಡಿಸಲಿನಲ್ಲಿ ವಾಸವಾಗಿದ್ದವು. ಮೃತ ಇಬ್ಬರೂ ಬಾಲಕಿಯರು ಹೊಸಡು ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಭಾನುವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಮುಳ್ಳಿಕಟ್ಟೆಯ ಗುಡಿಸಲಿನಿಂದ ಒಟ್ಟು ಐದು ಮಕ್ಕಳು ಹೊಸಡು ಗ್ರಾಮದ ಕೊಪ್ಪರಿಗೆ ಗುಡ್ಡೆಯಲ್ಲಿರುವ ‘ಕಡುಬಿನ ಕೆರೆ’ಗೆ ಬಟ್ಟೆ ತೊಳೆಯಲು ತೆರಳಿದ್ದರು. ಕೆರೆಯ ದಂಡೆಯ ಮೇಲೆ ಸುನೀತ ಮತ್ತು ವೈಶಾಲಿ ಬಟ್ಟೆ ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಅಸಹಾಯಕರಾಗಿ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಕರುಣಾಜನಕ ಆಕ್ರಂದನ ಸ್ಥಳದಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚಿನಲ್ಲೂ ನೀರು ತರಿಸುವಂತಿತ್ತು.

ಇದನ್ನೂ ಓದಿ: ತೆಲಂಗಾಣದಲ್ಲಿ ಸರಣಿ ನರಮೇಧ: ಪೋಕ್ಸೋ ಕೇಸ್ ಹಾಕಿದ್ದಕ್ಕೆ ಅಪ್ರಾಪ್ತೆ ಕುಟುಂಬ ಸೇರಿ 6 ಜನರ ಭೀಕರ ಕೊಲೆ ಮಾಡಿದ ಸೈಕೋ ಪತಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಖ್ಯಾತ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದ ತಂಡ, ‘ಟೀಮ್ ಹೆಚ್‌ಐ’ (Team HI) ತುರ್ತು ರಕ್ಷಣಾ ಪಡೆ, ಕುಂದಾಪುರ ಅಗ್ನಿಶಾಮಕ ದಳ ಹಾಗೂ ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯರ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ನಂತರ ಗಂಗೊಳ್ಳಿಯ ಶ್ರೀ ವೀರೇಶ್ವರ ಸೇವಾ ಟ್ರಸ್ಟ್‌ನ ಆಂಬ್ಯುಲೆನ್ಸ್ ಮೂಲಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಗಂಗೊಳ್ಳಿ ಠಾಣೆ ಪಿಎಸ್‌ಐ ಪವನ್ ನಾಯಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ