ರಂಗಾರೆಡ್ಡಿ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್‌ನಲ್ಲಿ ಇಡೀ ದೇಶವೇ ತಲೆತಗ್ಗಿಸುವಂತಹ ಅತ್ಯಂತ ಕ್ರೂರ ಹಾಗೂ ಭೀಕರ ಸರಣಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ವಿರುದ್ಧ ಲೈಂಗಿಕ ಕಿರುಕುಳದಡಿ ಪೋಕ್ಸೋ (POCSO) ಪ್ರಕರಣ ದಾಖಲಿಸಿದ್ದ 17 ವರ್ಷದ ಅಪ್ರಾಪ್ತ ಹುಡುಗಿ, ಆಕೆಯ ತಾಯಿ, ಅಜ್ಜಿ ಹಾಗೂ ತನ್ನದೇ ಸ್ವಂತ ಪತ್ನಿ ಮತ್ತು ಇಬ್ಬರು ಹಸುಗೂಸುಗಳನ್ನು ಸೇರಿ ಒಟ್ಟು 6 ಜನರನ್ನು 35 ವರ್ಷದ ನರಾಧಮನೊಬ್ಬ ಅತ್ಯಂತ ಜಾಗರೂಕತೆಯಿಂದ ಸ್ಕೆಚ್ ಹಾಕಿ ಕಟುಕನಂತೆ ಕೊಚ್ಚಿ ಕೊಲೆ ಮಾಡಿದ್ದಾನೆ
ಈ ರಕ್ತಪಿಪಾಸು ಹಂತಕನನ್ನು ರಾಜಕುಮಾರ್ ಎಂದು ಗುರುತಿಸಲಾಗಿದ್ದು, ಸದ್ಯ ಈತ ಇಡೀ ಸರಣಿ ಹತ್ಯಾಕಾಂಡ ನಡೆಸಿ ತಲೆಮರೆಸಿಕೊಂಡಿದ್ದಾನೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ರಾಜಕುಮಾರ್ ಶುಕ್ರವಾರ ತಡರಾತ್ರಿ ಶಾಬಾದ್‌ನಲ್ಲಿರುವ ತನ್ನ ನಿವಾಸದಲ್ಲಿ ಮೊದಲು ದಾಳಿ ನಡೆಸಿದ್ದಾನೆ. ಗಾಢ ನಿದ್ರೆಯಲ್ಲಿದ್ದ ತನ್ನ ಪತ್ನಿ ಪಾರ್ವತಿ ಸರಿತಾ (30), ಹಾಗೂ ಮಕ್ಕಳಾದ 4 ವರ್ಷ ಮತ್ತು ಕೇವಲ 1 ವರ್ಷದ ಇಬ್ಬರು ಗಂಡು ಮಕ್ಕಳನ್ನು ಉಸಿರುಗಟ್ಟಿಸಿ ಅಥವಾ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಮೃತದೇಹಗಳು ಪತ್ತೆಯಾದ ಕೋಣೆಯಲ್ಲಿ ತೀವ್ರ ಜಗಳ ನಡೆದಿರುವ ಕುರುಹುಗಳು ಸಿಕ್ಕಿದ್ದು, ಮಕ್ಕಳು ನಿದ್ರೆಯಲ್ಲೇ ಹೆಣವಾಗಿದ್ದಾರೆ. ಕೊಲೆಯ ಬಳಿಕ ಯಾರಿಗೂ ಅನುಮಾನ ಬಾರದಂತೆ ಮನೆಯ ಎಸಿ, ಕೂಲರ್ ಹಾಗೂ ಫ್ಯಾನ್‌ಗಳನ್ನು ಆನ್ ಮಾಡಿ ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದ.
ಪತ್ನಿ-ಮಕ್ಕಳನ್ನು ಕೊಂದ ಬೆನ್ನಲ್ಲೇ ಕಾರು ಹತ್ತಿದ ರಾಜಕುಮಾರ್, ನೇರವಾಗಿ ಮೇ 16 ರಂದು ತನ್ನ ವಿರುದ್ಧ ಪೋಕ್ಸೋ ಕಂಪ್ಲೇಂಟ್ ನೀಡಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿದ್ದಾನೆ. ಆಕೆಯನ್ನು ಕಾರಿನಲ್ಲಿ ಬಲವಂತವಾಗಿ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಅಪಹರಿಸಿಕೊಂಡು ಹೋಗಿ ಅಲ್ಲಿ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ರಕ್ತದ ಹಸಿವು, ಆಕೆಯ ಮನೆಗೆ ಮರಳಿ ಬಾಲಕಿಯ ತಾಯಿ (45) ಮತ್ತು 65 ವರ್ಷದ ಅಜ್ಜಿಯನ್ನೂ ಸಹ ಕೊಚ್ಚಿ ಕೊಂದಿದ್ದಾನೆ. ಕೃತ್ಯದ ವೇಳೆ ಮನೆಯಲ್ಲಿದ್ದ ಬಾಲಕಿಯ 20 ವರ್ಷದ ವಿಕಲಚೇತನ ಸಹೋದರಿಯನ್ನು ಮಾತ್ರ ಈತ ಮುಟ್ಟಿಲ್ಲ.
ಕೊಲೆ ಮಾಡಿ ತಂದೆಗೆ ಫೋನ್ ಮಾಡಿದ ಹಂತಕ!:
ಈ ಭೀಕರ ನರಮೇಧವನ್ನು ಮುಗಿಸಿದ ನಂತರ ಆರೋಪಿ ರಾಜಕುಮಾರ್ ಸ್ವತಃ ತನ್ನ ತಂದೆಗೆ ಫೋನ್ ಮಾಡಿದ್ದಾನೆ. “ನಾನು ಎಲ್ಲರನ್ನೂ ಮುಗಿಸಿಬಿಟ್ಟೆ. ಇವರೆಲ್ಲರನ್ನೂ ನಾನೇ ಕೊಲೆ ಮಾಡಿದ್ದೇನೆ. ಈಗ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,” ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಈ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸದ್ಯ ಹಂತಕನ ಪತ್ತೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ತರುಣ್ ಜೋಶಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
2018ರಲ್ಲಿ ಪ್ರೇಮ ವಿವಾಹವಾಗಿದ್ದ ರಾಜಕುಮಾರ್ ಜೂಜಿನ ದಾಸನಾಗಿದ್ದ ಹಾಗೂ ಮಾನಸಿಕ ಅಸ್ವಸ್ಥನಂತೆ ಆಡುತ್ತಿದ್ದ ಎನ್ನಲಾಗಿದೆ. ಈತ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ನಿರಂತರವಾಗಿ ಬೆನ್ನಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣ ಮೇ ತಿಂಗಳಲ್ಲಿ ಈತನನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಅರೆಸ್ಟ್ ಮಾಡಿದ್ದರು. ಆದರೆ, ಈ ಸೆಕ್ಷನ್‌ಗಳಿಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವುದರಿಂದ, ಕೇವಲ ಒಂದು ವಾರದ ಹಿಂದಷ್ಟೇ ಕೋರ್ಟ್‌ನಿಂದ 20,000 ರೂ. ಬಾಂಡ್ ನೀಡಿ ನಿರೀಕ್ಷಣಾ ಜಾಮೀನು (Anticipatory Bail) ಪಡೆದು ಹೊರಬಂದಿದ್ದ. ಜೈಲಿನಿಂದ ಬಂದ ತಕ್ಷಣ ದೂರು ನೀಡಿದವರ ಮೇಲೆ ರಿವೇಂಜ್ ತೀರಿಸಿಕೊಳ್ಳಲು ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ್ದಾನೆ.
ಫೊರೆನ್ಸಿಕ್ ತಂಡಗಳು ಸದ್ಯ ಎಲ್ಲಾ ಕ್ರೈಂ ಸೀನ್‌ಗಳನ್ನು ಪರಿಶೀಲಿಸುತ್ತಿದ್ದು, ಹಂತಕನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

