‘ಸೇನಾ ತರಬೇತಿಗೂ ಧರ್ಮದ ಬಣ್ಣ ಬಳಿದ ಕಾಂಗ್ರೆಸ್ ಸರ್ಕಾರ!’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತೀವ್ರ ಆಕ್ರೋಶ

ಮಂಗಳೂರು:  ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯು ಇದೀಗ ದೇಶದ ಭದ್ರತೆ ಹಾಗೂ ರಕ್ಷಣೆಗೆ ಸಂಬಂಧಿಸಿದ ಸೇನಾ ತರಬೇತಿಗೂ ವ್ಯಾಪಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಭಕ್ತಿ, ಶಿಸ್ತು ಮತ್ತು ಸೇನಾ ತರಬೇತಿಗೆ ಧರ್ಮದ ಆಧಾರದಲ್ಲಿ ಅರ್ಹತೆ ನಿಗದಿಪಡಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ ಕೇವಲ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೀಮಿತವಾಗಿ 60 ದಿನಗಳ ಸೇನಾ ತರಬೇತಿ ನೀಡಲು ಟೆಂಡರ್ ಆಹ್ವಾನಿಸಿರುವುದನ್ನು ಸಂಸದರು ಖಂಡಿಸಿದ್ದಾರೆ. ಸೇನಾ ತರಬೇತಿ ಎನ್ನುವುದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಸೌಲಭ್ಯವಲ್ಲ. ಅದು ಶಿಸ್ತು, ದೇಶಭಕ್ತಿ ಹಾಗೂ ರಾಷ್ಟ್ರೀಯ ಕರ್ತವ್ಯಪ್ರಜ್ಞೆಯನ್ನು ಬೆಳೆಸುವ ಪ್ರಕ್ರಿಯೆ. ಸೇನೆಗೆ ಸೇರುವ ಯುವಕರಿಗೆ ಧರ್ಮದ ಆಧಾರದಲ್ಲಿ ಅರ್ಹತೆ ನಿಗದಿಪಡಿಸುತ್ತಿರುವುದು ಸರಿಯಲ್ಲ ಎಂದು ಚೌಟ ಪ್ರಶ್ನಿಸಿದ್ದಾರೆ.

Advertisement

” ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರದಲ್ಲಿ ದೇಶಭಕ್ತಿಗೂ ಧರ್ಮದ ಬಣ್ಣವಿದೆಯೇ? ಸೇನಾ ಸಮವಸ್ತ್ರ ಧರಿಸುವ ಕನಸಿಗೂ ಧಾರ್ಮಿಕ ಅರ್ಹತೆ ಬೇಕೇ? ರಾಷ್ಟ್ರದ ಭದ್ರತೆ ವಿಚಾರದಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ಧಾರ್ಮಿಕ ಗೋಡೆ ಕಟ್ಟುವುದು ಯಾವ ರೀತಿಯ ನ್ಯಾಯ?” ಎಂದು ಅವರು ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ರಾಷ್ಟ್ರದ ಭದ್ರತೆ ಹಾಗೂ ದೇಶಭಕ್ತಿಯ ವಿಚಾರವನ್ನು ಧಾರ್ಮಿಕ ರಾಜಕಾರಣದ ಚೌಕಟ್ಟಿನಲ್ಲಿ ನೋಡುವುದು ಖಂಡನೀಯ ಎಂದಿದ್ದಾರೆ. “ಸಾರ್ವಜನಿಕರ ತೆರಿಗೆ ಹಣದಿಂದ ಯಾವುದೇ ತರಬೇತಿ ನಡೆಸುವುದಾದರೆ, ಅರ್ಹತೆ ಹೊಂದಿರುವ ಎಲ್ಲ ವಿದ್ಯಾರ್ಥಿಗಳಿಗೂ ಧರ್ಮದ ಭೇದವಿಲ್ಲದೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಇತರ ಸಮುದಾಯದ ಅರ್ಹ ಯುವಕರಿಗೂ ಇದೇ ರೀತಿಯ ತರಬೇತಿ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಇದು ಸಾರ್ವಜನಿಕ ಹಣದ ದುರ್ಬಳಕೆ ಹಾಗೂ ತಾರತಮ್ಯವಾಗುತ್ತದೆ,” ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಎಚ್ಚರಿಸಿದ್ದಾರೆ.

Advertisement

ಇದನ್ನೂ ಓದಿ: ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ ದುರಾಡಳಿತಕ್ಕೆ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಿದ್ದಾರೆ – ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಈ ಯೋಜನೆಯ ಟೆಂಡರ್‌ನ ಸಂಪೂರ್ಣ ವಿವರ, ಅಂದಾಜು ವೆಚ್ಚ, ಅರ್ಹತಾ ಮಾನದಂಡ ಮತ್ತು ಸಾರ್ವಜನಿಕ ಹಣದ ಬಳಕೆಯ ಕುರಿತು ಸರ್ಕಾರ ತಕ್ಷಣವೇ ಸ್ಪಷ್ಟನೆ ನೀಡಬೇಕು. ಜಾತ್ಯತೀತತೆಯ ಹೆಸರಿನಲ್ಲಿ ಆಡಳಿತ ನಡೆಸುವ ಸರ್ಕಾರ ಮೊದಲು ಸಂವಿಧಾನದ ಸಮಾನತೆಯ ಆಶಯವನ್ನು ಪಾಲಿಸಲಿ. ತುಷ್ಟೀಕರಣದ ರಾಜಕಾರಣವನ್ನು ಬದಿಗಿಟ್ಟು, ದೇಶದ ಯುವಶಕ್ತಿಯನ್ನು ಒಗ್ಗೂಡಿಸುವ ಕೆಲಸ ಮಾಡಲಿ ಎಂದು ಸಂಸದರು ಒತ್ತಾಯಿಸಿದ್ದಾರೆ.

Advertisement

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ