ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ವಿವಾದಾತ್ಮಕ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಸೇರಿದಂತೆ ಮೂವರು ಪ್ರಮುಖ ಆರೋಪಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೊಡ್ಡ ಸಮಾಧಾನಕರ ಮಹತ್ವದ ಆದೇಶ ನೀಡಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಕೃಪಾ ಆಳ್ವಾ, ವಿನೋದ್ ಕುಮಾರ್ ಹಾಗೂ ಪ್ರಶಾಂತ್ ಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಬೆಂಗಳೂರಿನ 66ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ (CCH) ಕೋರ್ಟ್, ಮೂವರಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು (Interim Anticipatory Bail) ಮಂಜೂರು ಮಾಡಿ ಆದೇಶಿಸಿದೆ.
ಕೋರ್ಟ್ ವಿಧಿಸಿರುವ ಪ್ರಮುಖ ಷರತ್ತುಗಳು:
ಮಧ್ಯಂತರ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯವು ಆರೋಪಿಗಳಿಗೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ:
ತನಿಖೆಗೆ ಸಂಪೂರ್ಣ ಸಹಕಾರ: ಆರೋಪಿಗಳು ಪೊಲೀಸರ ತನಿಖೆಗೆ ಹಾಗೂ ವಿಚಾರಣೆಗೆ ಕಡ್ಡಾಯವಾಗಿ ಸಹಕರಿಸಬೇಕು.
ಸಾಕ್ಷಿಗಳಿಗೆ ಬೆದರಿಕೆ ನಿಷೇಧ: ಪ್ರಕರಣದ ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸುವುದಾಗಲಿ ಅಥವಾ ಸಾಕ್ಷ್ಯಾಧಾರ ನಾಶಪಡಿಸುವ ಹಾಗೂ ಬೆದರಿಕೆ ಒಡ್ಡುವಂತಹ ಪ್ರಯತ್ನಗಳನ್ನು ಮಾಡಬಾರದು.
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಗಂಭೀರ ಷಡ್ಯಂತ್ರ ಹಾಗೂ ಕಟ್ಟುಕಥೆ ಎಂದು ಪೊಲೀಸರು ಈಗಾಗಲೇ ತನಿಖಾ ವರದಿ ಸಲ್ಲಿಸಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ಚಿಟ್ ನೀಡಿದ್ದರು. ಇದೀಗ ಈ ಪ್ರಕರಣದ ಪ್ರಮುಖ ರೂವಾರಿಗಳಿಗೆ ಕೋರ್ಟ್ನಿಂದ ಮಧ್ಯಂತರ ಜಾಮೀನು ಸಿಕ್ಕಿರುವುದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

