ಪಿಲಿಗೂಡು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಆಗ್ರಹ: ಕಲ್ಲೇರಿಯಲ್ಲಿ SDPIಯಿಂದ ಹಾಡು, ವ್ಯಂಗ್ಯದ ಪೋಸ್ಟರ್ ಮೂಲಕ ವಿನೂತನ ಪ್ರತಿಭಟನೆ!

ಬೆಳ್ತಂಗಡಿ: ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿ ದುಸ್ಥಿತಿಗೆ ತಲುಪಿರುವ ಪಿಲಿಗೂಡು–ಉಪ್ಪಿನಂಗಡಿ ರಸ್ತೆಯನ್ನು ತಕ್ಷಣವೇ ಪೂರ್ಣ ಪ್ರಮಾಣದಲ್ಲಿ ಮರು ಡಾಂಬರೀಕರಣಗೊಳಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಕಲ್ಲೇರಿಯಲ್ಲಿ ವಿನೂತನ ಮಾದರಿಯ ಪ್ರತಿಭಟನೆ ನಡೆಯಿತು. ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ನರಕಯಾತನೆಯನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದ ಪ್ರತಿಭಟನಾಕಾರರು, ಸ್ಥಳೀಯ ಬಿಜೆಪಿ ಶಾಸಕ ಹರೀಶ್ ಪೂಂಜ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಹಾಡಿನ ಮೂಲಕ ಸರ್ಕಾರದ ಮೌನಕ್ಕೆ ವ್ಯಂಗ್ಯ:

“ಜನರ ರಸ್ತೆಯ ದುಸ್ಥಿತಿ ಕಂಡರೂ ಸರ್ಕಾರ ಮೌನವಾಗಿದೆ. ಜನರ ನೋವಿಗೆ ಸ್ಪಂದಿಸದೆ ಬರಿ ರಾಜಕೀಯ ಮಾಡುತ್ತಿದೆ” ಎನ್ನುವ ಆಶಯದ ಹಾಡನ್ನು ಹಾಡುವ ಮೂಲಕ ಪ್ರತಿಭಟನಾಕಾರರು ಶಾಸಕರು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ವ್ಯಂಗ್ಯವಾಡಿದರು.

 “ಸಾರ್ವಜನಿಕರಿಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ. ನಮಗೆ ತಾತ್ಕಾಲಿಕ ಪ್ಯಾಚ್‌ವರ್ಕ್ ಕಾಮಗಾರಿಯೂ ಅಗತ್ಯವಿಲ್ಲ, ನಮಗೆ ಬೇಕಿರುವುದು ಸಂಪೂರ್ಣ ರಸ್ತೆ ಡಾಂಬರೀಕರಣ. ನಿಮ್ಮ ರಾಜಕೀಯ ನಾಟಕ ಇನ್ಮುಂದೆ ನಡೆಯುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದರ ಕಾರ್ಯವೈಖರಿಯನ್ನು ಹಾಡಿನ ಮೂಲಕವೇ ಟೀಕಿಸಿದ ಪ್ರತಿಭಟನಾಕಾರರು, “ಸಂಸದರು ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಇದ್ದಾರೆ. ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಹಾಕುವ ಹಿಡಿಶಾಪ ಜನಪ್ರತಿನಿಧಿಗಳನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಯತ್ನಾಳ್ ಹಾಕಿದ ಎರಡು ಷರತ್ತಿಗೆ ಒಪ್ಪಿದ ಬಿವೈ ವಿಜಯೇಂದ್ರ

ಶಾಸಕ ಪೂಂಜ ಫೋಟೋ ಬಳಸಿ ವ್ಯಂಗ್ಯದ ಪೋಸ್ಟರ್ ಪ್ರದರ್ಶನ:

ರಸ್ತೆಯ ಭೀಕರ ಸ್ಥಿತಿಯನ್ನು ಎತ್ತಿ ತೋರಿಸಲು ಶಾಸಕ ಹರೀಶ್ ಪೂಂಜ ಅವರ ಭಾವಚಿತ್ರವಿರುವ ವ್ಯಂಗ್ಯಾತ್ಮಕ ಬ್ಯಾನರ್‌ಗಳನ್ನು ಪ್ರತಿಭಟನಾ ಸ್ಥಳದಲ್ಲಿ ಅಳವಡಿಸಲಾಗಿತ್ತು. ಹೊಂಡಮಯ ರಸ್ತೆಯಲ್ಲಿ ವಾಹನ ಸವಾರರು ಅನುಭವಿಸುವ ಸಂಕಷ್ಟಗಳನ್ನು ವ್ಯಂಗ್ಯದ ಪೋಸ್ಟರ್‌ಗಳ ಮೂಲಕ ಬಿಂಬಿಸಿ, ಶಾಸಕರ ಹಾಗೂ ಇಲಾಖೆಯ ಗಮನ ಸೆಳೆಯಲು ಯತ್ನಿಸಲಾಯಿತು.

ಅರ್ಧಂಬರ್ಧ ಕಾಮಗಾರಿ ಅಥವಾ ಪ್ಯಾಚ್‌ವರ್ಕ್ ನಡೆಸದೆ, ಪಿಲಿಗೂಡು–ಉಪ್ಪಿನಂಗಡಿ ಸಂಪರ್ಕ ರಸ್ತೆಗೆ ಸಂಪೂರ್ಣ ಮರು ಡಾಂಬರೀಕರಣ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು SDPI ನಾಯಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ