ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಮರು-ಪರಿಶೀಲನೆ (Re-verification) ಹಾಗೂ ಸರ್ವೇ ಹೆಸರು ಹೇಳಿಕೊಂಡು ಸಾರ್ವಜನಿಕರ ಬಳಿ ಒಟಿಪಿ (OTP) ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪಡೆಯುತ್ತಿರುವ ಜಾಲದ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತೀವ್ರ ಎಚ್ಚರಿಕೆ ನೀಡಿದೆ.
ಕೆಲವು ಪ್ರದೇಶಗಳಲ್ಲಿ ಅನಧಿಕೃತ ವ್ಯಕ್ತಿಗಳು ಗೃಹಲಕ್ಷ್ಮಿ ಯೋಜನೆಯ ಸರ್ವೇ ನೆಪದಲ್ಲಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಲಾಖೆಯ ಉಪನಿರ್ದೇಶಕರು ಸಾರ್ವಜನಿಕರಿಗೆ ಜಾಗೃತರಾಗಿರಲು ಸೂಚಿಸಿದ್ದಾರೆ.
ಆಧಾರ್-ಲಿಂಕ್ಡ್ ಒಟಿಪಿ ಮತ್ತು ಪ್ರಕ್ರಿಯೆಯ ಬಗ್ಗೆ ಇಲಾಖೆ ಸ್ಪಷ್ಟನೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿರುವ ಅಧಿಕೃತ ಮಾಹಿತಿ. ಇಲಾಖೆಯು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮರು-ಪರಿಶೀಲನೆ ಅಥವಾ ಸರ್ವೇ ಕಾರ್ಯವನ್ನು ಸದ್ಯಕ್ಕೆ ಇನ್ನೂ ಪ್ರಾರಂಭಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಆದೇಶದಂತೆ ಅಧಿಕೃತ ಮರು-ಪರಿಶೀಲನೆ ಆರಂಭವಾದಾಗ ಫಲಾನುಭವಿಯ ಗುರುತನ್ನು ದೃಢೀಕರಿಸಲು ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಅಗತ್ಯವಿರುತ್ತದೆ.
ಪ್ರಸ್ತುತ ಇಲಾಖೆಯಿಂದ ಯಾವುದೇ ಸರ್ವೇ ಆರಂಭವಾಗದಿರುವುದರಿಂದ, ಯೋಜನೆ ಹೆಸರಿನಲ್ಲಿ ಬರುವ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಒಟಿಪಿ (OTP), ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಇತರ ವೈಯಕ್ತಿಕ ರಹಸ್ಯ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದು ಇಲಾಖೆ ವಿನಂತಿಸಿದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ಗೃಹಲಕ್ಷ್ಮೀಯರಿಗೆ ಸಿದ್ದರಾಮಯ್ಯ ಬಂಪರ್ ಕೊಡುಗೆ; 28,608 ಕೋಟಿ ರೂ. ಅನುದಾನ ಘೋಷಣೆ!
ಅಧಿಕೃತ ಮರು-ಪರಿಶೀಲನೆ ಪ್ರಕ್ರಿಯೆಯ ಕುರಿತು ಸರ್ಕಾರಿ ಆದೇಶ ಹೊರಬಿದ್ದ ನಂತರವಷ್ಟೇ ಇಲಾಖೆಯು ಅಧಿಕೃತವಾಗಿ ಮಾಹಿತಿ ನೀಡಲಿದ್ದು, ಅಲ್ಲಿಯವರೆಗೆ ಇಂತಹ ವಂಚಕರ ಕರೆ ಹಾಗೂ ಭೇಟಿಗಳಿಗೆ ಸ್ಪಂದಿಸದಂತೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇಲಾಖೆ ಮನವಿ ಮಾಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

