ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ ದುರಾಡಳಿತಕ್ಕೆ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಿದ್ದಾರೆ – ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ರಾಜ್ಯದ ವಿಧಾನ ಪರಿಷತ್ತಿನ (MLC) ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಗಳನ್ನು ಅಭೂತಪೂರ್ವವಾಗಿ ಗೆಲ್ಲಿಸುವ ಮೂಲಕ ರಾಜ್ಯದ ಶಿಕ್ಷಕರು ಹಾಗೂ ಪದವೀಧರ ಮತದಾರರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಇವಿಎಂ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್‌ಗೆ ಬ್ಯಾಲಟ್ ಪೇಪರ್ ಜಯ ಕಣ್ಣು ತೆರೆಸಲಿ”:

 “ದೇಶದಲ್ಲಿ ಪ್ರತಿಯೊಂದು ಸೋಲಿಗೂ ಇವಿಎಂ (EVM) ಮೇಲೆ ಸದಾ ಗೂಬೆ ಕೂರಿಸುವ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರಿಗೆ ಈ ಫಲಿತಾಂಶವು ಕಣ್ಣು ತೆರೆಸಬೇಕಾಗಿದೆ. ಏಕೆಂದರೆ ಈ ಚುನಾವಣೆ ನಡೆದಿರುವುದು ಬ್ಯಾಲಟ್ ಪೇಪರ್ ಮೂಲಕ ಎನ್ನುವುದನ್ನು ಕಾಂಗ್ರೆಸ್‌ ನಾಯಕರು ಮರೆಯಬಾರದು.”

 “ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ದುರಾಡಳಿತದ ಬಗ್ಗೆ ರಾಜ್ಯದ ಜನತೆ ಎಷ್ಟೊಂದು ಬೇಸತ್ತು ಹೋಗಿದ್ದಾರೆ ಎನ್ನುವುದಕ್ಕೆ ಇದು ನೇರ ಸಾಕ್ಷಿ. ಇಷ್ಟಾದ ಮೇಲೆಯೂ ರಾಹುಲ್ ಗಾಂಧಿ ಮತಪತ್ರಗಳನ್ನು ಅಥವಾ ಪ್ರಜ್ಞಾವಂತ ಮತದಾರರನ್ನೇ ನಿಂದಿಸುತ್ತಾರೆಯೇ? ನಾಟಕೀಯ ರಾಜಕೀಯದ ಮೂಲಕ ತನ್ನ ಪತನವನ್ನು ಮುಚ್ಚಿಡಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ರಾಹುಲ್ ಗಾಂಧಿಯವರ ಅಸ್ತಿತ್ವ ಎಲ್ಲೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.”

“ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ, ಖಜಾನೆ ಖಾಲಿ”:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ- 2047’ರ ಕನಸನ್ನು ಸಾಕಾರಗೊಳಿಸಲು ಪ್ರಬುದ್ಧ ಮತದಾರರು ಎನ್‌ಡಿಎ ಅಭ್ಯರ್ಥಿಗಳನ್ನು ಆರಿಸಿ ಕಳುಹಿಸಿದ್ದಾರೆ ಎಂದ ಸಂಸದ ಚೌಟ. “ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗ್ಯಾರಂಟಿಗಳ ನೆಪ ಹೇಳಿ ರಾಜ್ಯದ ಖಜಾನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಲು ‘ಸರ್ಕಾರದಲ್ಲಿ ದುಡ್ಡೇ ಇಲ್ಲ’ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಶೋಚನೀಯ ಪರಿಸ್ಥಿತಿಗೆ ಸಿಎಂ ಡಿಕೆ ಶಿವಕುಮಾರ್ ತಲುಪಿದ್ದಾರೆ. ದೇಶದ ಆರ್ಥಿಕ ಪ್ರಗತಿಯ ಎಂಜಿನ್ ಆಗಿದ್ದ ಕರ್ನಾಟಕವನ್ನು ಆರ್ಥಿಕ ಅರಾಜಕತೆಗೆ ತಳ್ಳಲಾಗಿದೆ. ಕಾಂಗ್ರೆಸ್ಸಿನ ಅಪಪ್ರಚಾರ ಹಾಗೂ ಬೊಕ್ಕಸ ಲೂಟಿಗೆ ಶಿಕ್ಷಿತ ಸಮಾಜ ನೀಡಿರುವ ಸರಿಯಾದ ಉತ್ತರವೇ ಈ ಫಲಿತಾಂಶ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: “ರಾಜಕೀಯ ಕೊಲೆಗಾರರು ತಪ್ಪಿಸಿಕೊಳ್ಳಬಾರದು!”; ಸುಪ್ರೀಂ ಕೋರ್ಟ್

“ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೊಂದೇ ಮಾರ್ಗ”:

ಈ ಜನವಿರೋಧಿ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುವುದೊಂದೇ ಕರ್ನಾಟಕವನ್ನು ಮರಳಿ ಅಭಿವೃದ್ಧಿಯ ಹಾದಿಗೆ ತರಲು ಇರುವ ಏಕೈಕ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೈತಿಕತೆ ಕಳೆದುಕೊಂಡಿರುವ ಈ ಸರ್ಕಾರಕ್ಕೆ ಜನತೆ ಸಂಪೂರ್ಣವಾಗಿ ಪಾಠ ಕಲಿಸಬೇಕು ಎಂದು ಕ್ಯಾ. ಬ್ರಿಜೇಶ್ ಚೌಟ ಕರೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ