ನವದೆಹಲಿ : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮಂಜೂರಾಗಿರುವ ಜಾಮೀನನ್ನು ಪ್ರಶ್ನಿಸಿ ಸಿಬಿಐ ಹಾಗೂ ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಹಾಗೂ ನ್ಯಾಯಮೂರ್ತಿ ಶ್ರೀಚಂದ್ರಶೇಖರ್ ಅವರನ್ನೊಳಗೊಂಡ ಪೀಠವು ಸುದೀರ್ಘ ವಾದ-ಪ್ರತಿವಾದ ಆಲಿಸಿತು. ವಿಚಾರಣೆ ವೇಳೆ, “ರಾಜಕೀಯ ಕೊಲೆಗಳನ್ನು ಅತ್ಯಂತ ಕಠಿಣವಾಗಿ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಕೊಲೆಗಾರರು ಕಾನೂನಿನಿಂದ ತಪ್ಪಿಸಿಕೊಳ್ಳಬಾರದು” ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಲು ಉಭಯ ಪಕ್ಷಕಾರರಿಗೆ 5 ದಿನಗಳ ಗಡುವು ನೀಡಲಾಗಿದೆ.
ಸಿಬಿಐ ಪರ ಎಎಸ್ಜಿ ಎಸ್.ವಿ. ರಾಜು ವಾದವೇನು?
ಸಾಕ್ಷಿ ನಾಶ ಹಾಗೂ ಭ್ರಷ್ಟಾಚಾರದ ಆರೋಪ:
ಶಾಸಕರಾಗಿರುವ ವಿನಯ್ ಕುಲಕರ್ಣಿ ವಿರುದ್ಧ ಸಾಕ್ಷಿ ನಾಶಪಡಿಸಿದ ಹಾಗೂ ಸಾಕ್ಷಿಗಳಿಗೆ ಆಮಿಷ ಒಡ್ಡಲು ಯತ್ನಿಸಿದ ಗಂಭೀರ ಆರೋಪಗಳಿವೆ. ಸಾಕ್ಷಿಗಳಿಗೆ ಆಮಿಷ ಒಡ್ಡುವುದು ಸಹ ಭ್ರಷ್ಟಾಚಾರದ ಭಾಗವೇ ಆಗಿದೆ.
ಮಾಫಿ ಸಾಕ್ಷಿ ಮತ್ತು ಪೂರಕ ಆಧಾರಗಳು:
ಪ್ರಕರಣದಲ್ಲಿ ಮಾಫಿ ಸಾಕ್ಷಿಯ ಹೇಳಿಕೆಯ ಜೊತೆಗೆ ಬಲವಾದ ಪೂರಕ ಸಾಕ್ಷಿಗಳಿವೆ. ಹೈಕೋರ್ಟ್ಗೆ ಇವರ ಕ್ರಿಮಿನಲ್ ಹಿನ್ನೆಲೆಯ 2 ಪ್ರಕರಣಗಳ ಮಾಹಿತಿ ನೀಡಿದ್ದರೂ ಅದನ್ನು ಪರಿಗಣಿಸದೆ ಜಾಮೀನು ಹಾಗೂ ಶಿಕ್ಷೆಗೆ ತಡೆ ನೀಡಿರುವುದು ಹೈಕೋರ್ಟ್ನ ದೊಡ್ಡ ಲೋಪವಾಗಿದೆ ಎಂದು ಸಿಬಿಐ ಪರ ವಕೀಲರು ವಾದಿಸಿದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಜೈಪುರ ಬಳಿ ಬಸ್-ಟ್ರಕ್ ಮುಖಾಮುಖಿ ಡಿಕ್ಕಿ; ಮೂವರು ದಾರುಣ ಸಾವು
ವಿನಯ್ ಕುಲಕರ್ಣಿ ಪರ ಅಭಿಷೇಕ್ ಸಿಂಘ್ವಿ ವಾದವೇನು?
ಆರಂಭಿಕ ಚಾರ್ಜ್ಶೀಟ್ನಲ್ಲಿ ಹೆಸರಿರಲಿಲ್ಲ:
ಘಟನೆ ನಡೆದ 4 ವರ್ಷಗಳ ಬಳಿಕ ಸಿಬಿಐ ವಿನಯ್ ಕುಲಕರ್ಣಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಮೊದಲ ಚಾರ್ಜ್ಶೀಟ್ನಲ್ಲಿ ಅವರ ಹೆಸರೇ ಇರಲಿಲ್ಲ. 30ನೇ ಸಾಕ್ಷಿ ಹೊರತುಪಡಿಸಿ ಇನ್ನುಳಿದ ಬಹುತೇಕ ಸಾಕ್ಷಿಗಳು ಪ್ರತಿಕೂಲ (Hostile) ನುಡಿದಿದ್ದಾರೆ.
ಭೂ ವಿವಾದದಿಂದ ಕೊಲೆ:
ಯೋಗೀಶ್ ಗೌಡ ಕೊಲೆಗೆ ಭೂ ವಿವಾದವೇ ಕಾರಣ ಎಂದು ಅವರ ಪತ್ನಿಯೇ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ವಿಚಾರಣಾ ನ್ಯಾಯಾಲಯವು ಎ-1 ಆಗಿದ್ದ ಮಾಫಿ ಸಾಕ್ಷಿ ಹೇಳಿಕೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ಶಿಕ್ಷೆ ವಿಧಿಸಿತ್ತು. ಇದನ್ನು ಪರಿಶೀಲಿಸಿ ಹೈಕೋರ್ಟ್ ನೀಡಿದ ತಡೆ ಹಾಗೂ ಜಾಮೀನು ಆದೇಶ ಸೂಕ್ತವಾಗಿದೆ ಎಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

