ಮೈಸೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ (Sting Operation) ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಮಸಿ ಬಳಿಯಲು ಮತ್ತು ಬ್ಲಾಕ್ಮೇಲ್ ಮಾಡುವ ದುರುದ್ದೇಶದಿಂದಲೇ ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತೀವ್ರ ಸ್ಫೋಟಕ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕೃತ್ಯದಲ್ಲಿ ಸ್ವತಃ ನಮ್ಮ ಪಕ್ಷದವರೇ (ಕಾಂಗ್ರೆಸ್) ಶಾಮೀಲಾಗಿದ್ದಾರೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಭೂಕಂಪ ಸೃಷ್ಟಿಸಿದ್ದಾರೆ.
“40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲದೆ ನಡೆದುಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಘನತೆಗೆ ಮಸಿ ಬಳಿಯಲು, ಅವರ ತೇಜೋವಧೆ ಮಾಡಲು ಮತ್ತು ಬ್ಲಾಕ್ಮೇಲ್ ಮಾಡುವ ದುಷ್ಟ ಉದ್ದೇಶದಿಂದಲೇ ಈ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ” ಎಂದು ಯತೀಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ವಪಕ್ಷೀಯರ ಕೈವಾಡ ಶಂಕೆ:
ಈ ಸ್ಟಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವವರ ಪೈಕಿ ನಮ್ಮ ಪಕ್ಷದವರೂ (ಕಾಂಗ್ರೆಸ್) ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಲ್ಲದೆ, ಓರ್ವ ಪ್ರಮುಖ ಮಾಧ್ಯಮ ಮುಖ್ಯಸ್ಥರೂ ಸಹ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ ಎಂದರು.
ಪುತ್ತೂರು ಟಿಕೆಟ್ ಆಟ:
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಹಿಂದೆ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿ ಇದೆ. ರಾಜಕೀಯ ಲಾಭ ಪಡೆಯುವ ಸಲುವಾಗಿಯೇ ಈ ಕೃತ್ಯ ಎಸಗಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪೊಲೀಸ್ ತನಿಖೆಯ ಮೇಲೆ ವಿಶ್ವಾಸ:
ಪ್ರಕರಣದ ಕುರಿತು ಪೊಲೀಸರು ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಈ ಸ್ಟಿಂಗ್ ಹಿಂದೆ ಯಾರಿದ್ದಾರೆ? ಇದರ ಸೂತ್ರಧಾರಿಗಳು ಯಾರು ಎಂಬುದು ತನಿಖೆಯಿಂದ ಹೊರಬರಬೇಕು. ಒಂದು ವೇಳೆ ತನಿಖೆ ನಿರೀಕ್ಷಿತ ಮಟ್ಟದಲ್ಲಿ ನಡೆಯದಿದ್ದರೆ ಮುಂದಿನ ರಾಜಕೀಯ ಹಾಗೂ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ‘ಸ್ಟಿಂಗ್ ಆಪರೇಷನ್’ ತನಿಖೆ ಚುರುಕು: ಹಿರಿಯ ಪತ್ರಕರ್ತನ ವಿಚಾರಣೆ ನಡೆಸಿದ CCB
“ಸತ್ಯ ನಮ್ಮ ಕಡೆಯಿದೆ, ತಂದೆ ಯಾವುದೇ ತಪ್ಪು ಮಾಡಿಲ್ಲ”:
ತಮ್ಮ ತಂದೆಯವರ ಮನಸ್ಥಿತಿ ಕುರಿತು ಮಾತನಾಡುತ್ತಾ ಭಾವನಾತ್ಮಕವಾಗಿ ನುಡಿದ ಯತೀಂದ್ರ, “ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಇಂತಹ ಸುಳ್ಳು ಮತ್ತು ಕಪೋಲಕಲ್ಪಿತ ಆರೋಪಗಳು ಕೇಳಿಬಂದಾಗ ಯಾರೇ ಆದರೂ ಬೇಸರಗೊಳ್ಳುವುದು ಸಹಜ. ಸಿದ್ದರಾಮಯ್ಯ ಅವರು ಕೂಡ ಇದರಿಂದ ತೀವ್ರ ನೊಂದಿದ್ದಾರೆ. ಆದರೆ, ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ ಎಂದು ನಮ್ಮ ತಾಯಿ ಕೂಡ ದೃಢವಾಗಿ ನಂಬಿದ್ದಾರೆ. ಸತ್ಯ ನಮ್ಮ ಕಡೆಯಿದೆ, ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾರು ಏನೇ ಸಂಚು ರೂಪಿಸಿದರೂ, ಸತ್ಯ ಹೊರಬೀಳುವವರೆಗೂ ಇದನ್ನು ಧೈರ್ಯವಾಗಿ ಎದುರಿಸುವುದಾಗಿ ಅವರು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

