ಗ್ಯಾರಂಟಿ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಶೋರ್ ಕುಮಾರ್ ಪುತ್ತೂರು ವಾಗ್ದಾಳಿ

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರ ಮೇಲೆ ನಿರಂತರ ಹೊರೆ ಹೇರುತ್ತಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನೂ ಹೆಚ್ಚಿಸುವ ಮೂಲಕ ಜನರ ದೈನಂದಿನ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ ಎಂದು ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಗತ್ಯ ವಸ್ತುಗಳ ಬೆಲೆ ಹಾಗೂ ಸಾರಿಗೆ ದರಗಳನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.

Advertisement

ಹಾಲಿನ ದರ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಹೊರೆ

ಕ್ಷೀರ ಕ್ರಾಂತಿಯ ನಾಡಾದ ಕರ್ನಾಟಕದಲ್ಲಿ ಬಡವರ ಮಕ್ಕಳಿಗೆ ಅಗತ್ಯವಾಗಿರುವ ಹಾಲಿನ ಬೆಲೆಯನ್ನೂ ಸರ್ಕಾರ ಹೆಚ್ಚಿಸಿರುವುದು ಖಂಡನೀಯ. ಆರಂಭದಲ್ಲಿ ₹8ರಷ್ಟು ದರ ಏರಿಕೆಯ ಬಗ್ಗೆ ಹೇಳಲಾಗಿದ್ದರೂ, ಇದೀಗ ಕೆಲವು ಹಾಲಿನ ಉತ್ಪನ್ನಗಳ ದರದಲ್ಲಿ ₹12ರವರೆಗೂ ಹೆಚ್ಚಳವಾಗಿದೆ. ದಿನನಿತ್ಯದ ಅಗತ್ಯ ವಸ್ತುವಾಗಿರುವ ಹಾಲಿನ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದರು.

Advertisement

ಈ ದರ ಏರಿಕೆಯಿಂದ ರೈತರು ಮತ್ತು ಹೈನುಗಾರರಿಗೆ ನಿರೀಕ್ಷಿತ ನ್ಯಾಯ ಸಿಗುತ್ತಿಲ್ಲ. ಬದಲಾಗಿ ಸರ್ಕಾರದ ಅಸಮರ್ಥ ಆಡಳಿತದ ಹೊರೆ ಸಾಮಾನ್ಯ ಜನರ ಮೇಲೆ ಬೀಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬಸ್ ಪ್ರಯಾಣ ದರ ಏರಿಕೆ: ಪ್ರಯಾಣಿಕರಿಗೆ ಮತ್ತೊಂದು ಹೊಡೆತ

ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಿರುವುದು ಜನಸಾಮಾನ್ಯರಿಗೆ ಮತ್ತೊಂದು ಆರ್ಥಿಕ ಹೊಡೆತವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಗರಿಷ್ಠ ₹9ರಷ್ಟು ಹೆಚ್ಚಿಸಲಾಗಿದ್ದು, ಬಿಎಂಟಿಸಿ ಬಸ್‌ಗಳ ಪ್ರಯಾಣ ದರವನ್ನೂ ಪ್ರತಿ ಹಂತಕ್ಕೆ ₹6ರಿಂದ ₹10ರವರೆಗೆ ಹೆಚ್ಚಿಸಲಾಗಿದೆ ಎಂದರು.

ಇದನ್ನೂ ಓದಿ: ಪ್ರದೀಪ್ ಪೂಜಾರಿ ಬಡವನೆಂಬ ಕಾರಣಕ್ಕೆ ಅನ್ಯಾಯ: ಕಿಶೋರ್ ಕುಮಾರ್ ಪುತ್ತೂರು

ಒಂದೆಡೆ ಶಕ್ತಿ ಯೋಜನೆಯ ಹೆಸರಿನಲ್ಲಿ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡುತ್ತಿರುವ ಸರ್ಕಾರ, ಮತ್ತೊಂದೆಡೆ ಪುರುಷರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಬಸ್‌ಗಳನ್ನು ಅವಲಂಬಿಸಿರುವ ಸಾವಿರಾರು ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಹೇರುತ್ತಿದೆ. ಡೀಸೆಲ್ ಬೆಲೆ ಹಾಗೂ ಸಾರಿಗೆ ನಿಗಮಗಳ ನಷ್ಟದ ನೆಪದಲ್ಲಿ ಪ್ರಯಾಣ ದರ ಹೆಚ್ಚಿಸಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಿಶೋರ್ ಕುಮಾರ್ ಟೀಕಿಸಿದ್ದಾರೆ.

ಗ್ಯಾರಂಟಿಗಳ ಹೆಸರಿನಲ್ಲಿ ತೆರಿಗೆ ಮತ್ತು ಶುಲ್ಕಗಳ ಹೊರೆ

ರಾಜ್ಯದಲ್ಲಿ ಹಾಲು ಮತ್ತು ಬಸ್ ಪ್ರಯಾಣ ದರ ಮಾತ್ರವಲ್ಲದೆ, ಆಸ್ತಿ ನೋಂದಣಿ ಶುಲ್ಕ, ಜನನ ಮತ್ತು ಮರಣ ಪ್ರಮಾಣಪತ್ರಗಳ ಶುಲ್ಕ ಸೇರಿದಂತೆ ವಿವಿಧ ಸೇವೆಗಳ ದರಗಳೂ ಹೆಚ್ಚಾಗಿವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳದಿಂದ ಅಗತ್ಯ ವಸ್ತುಗಳು ಹಾಗೂ ತರಕಾರಿಗಳ ಬೆಲೆಯೂ ಏರಿಕೆಯಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಂದು ಕೈಯಿಂದ ₹2,000 ನೀಡಿ, ಮತ್ತೊಂದು ಕೈಯಿಂದ ವಿವಿಧ ಬೆಲೆ ಏರಿಕೆ ಮತ್ತು ಶುಲ್ಕಗಳ ಮೂಲಕ ₹5,000 ವಸೂಲಿ ಮಾಡುವ ರೀತಿಯಲ್ಲಿ ಸರ್ಕಾರದ ಆಡಳಿತ ನಡೆಯುತ್ತಿದೆ. ಇದು ಜನಪರ ಆಡಳಿತವಲ್ಲ, ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರುವ ಆಡಳಿತ ಎಂದು ಅವರು ಕಿಡಿಕಾರಿದ್ದಾರೆ.

ದರ ಏರಿಕೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ತಕ್ಷಣವೇ ಹಾಲಿನ ದರ ಏರಿಕೆ ಹಾಗೂ ಅವೈಜ್ಞಾನಿಕ ಬಸ್ ಪ್ರಯಾಣ ದರ ಹೆಚ್ಚಳವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಜಿಲ್ಲಾಮಟ್ಟದಿಂದ ರಾಜ್ಯಮಟ್ಟದವರೆಗೆ ಬಿಜೆಪಿ ವತಿಯಿಂದ ಬೃಹತ್ ಜನಾಂದೋಲನ ಹಮ್ಮಿಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ