ವಾರಾಣಸಿ: ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಹಾಗೂ ಶ್ರೇಷ್ಠ ಸಂಯೋಜಕರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ್ ಅವರ 250ನೇ ಜನ್ಮೋತ್ಸವದ ಅಂಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರಾಣಸಿಯ ಐಐಟಿ (ಬಿಎಚ್ಯು) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ₹250 ಮುಖಬೆಲೆಯ ವಿಶೇಷ ನೆನಪಿನ ನಾಣ್ಯವನ್ನು (Commemorative Coin) ಬಿಡುಗಡೆ ಮಾಡಿದ್ದಾರೆ.ಇದೇ ವೇಳೆ ಮುತ್ತುಸ್ವಾಮಿ ದೀಕ್ಷಿತರ್ ಅವರ ಜೀವನ, ತತ್ತ್ವಶಾಸ್ತ್ರ ಹಾಗೂ ಸಂಗೀತ ಕೊಡುಗೆಗಳನ್ನು ಒಳಗೊಂಡ ‘ಅಮರ ಗುರುಗುಹಂ ಪೋಟ್ರುವಂ’ (Amara Guruguham Potruvam) ಎಂಬ ವಿಶೇಷ ಗ್ರಂಥವನ್ನೂ ಸಚಿವರು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಸಂಗೀತ ಕ್ಷೇತ್ರದ ಸಮೃದ್ಧ ಪರಂಪರೆ ಹಾಗೂ ಅದಕ್ಕೆ ದೀಕ್ಷಿತರ್ ನೀಡಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು. ದೀಕ್ಷಿತರ್ ಅವರು ಕಾಶಿಯಲ್ಲಿ (ವಾರಾಣಸಿ) ತಂಗಿದ್ದ ದಿನಗಳು ಹಾಗೂ ಅವರ ವಿಶಿಷ್ಟ ವೀಣಾ ವಾದನ ವೈಖರಿಯನ್ನು ಸಚಿವರು ಕೊಂಡಾಡಿದರು.

ಭಾರತದ ಸಾಂಸ್ಕೃತಿಕ ಹಾಗೂ ಸಂಗೀತ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ ಸಚಿವರು, ಕಾರ್ಯಕ್ರಮ ಸಂಘಟಿಸಿದ ಐಐಟಿ-ಬಿಎಚ್ಯು ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಬಿಎಚ್ಯು ಕುಲಪತಿ ಪ್ರೊ. ಅಜಿತ್ ಕುಮಾರ್ ಚತುರ್ವೇದಿ ಹಾಗೂ ಐಐಟಿ (ಬಿಎಚ್ಯು) ನಿರ್ದೇಶಕ ಪ್ರೊ. ಅಮಿತ್ ಪಾತ್ರ ಅವರು ದೀಕ್ಷಿತರ್ ಅವರ ಶಾಸ್ತ್ರೀಯ ಸಂಗೀತ ಸಾಧನೆಯನ್ನು ಸ್ಮರಿಸಿದರು. ಪ್ರಸಿದ್ಧ ಗಾಯಕಿ ಡಾ. ಸುಮಿತ್ರಾ ವಾಸುದೇವ್ ಹಾಗೂ ವೀಣಾ ವಾದಕ ರಮಣ ಬಾಲಚಂದ್ರನ್ ಅವರ ಸಂಗೀತ ಕಚೇರಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಇದನ್ನೂ ಓದಿ: ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಲು ಮೋದಿ ಸರ್ಕಾರ ಮುಂದು: ‘ಖೇಸೆಗೆ ಕನ್ನ’ ಎಂದು ಎಐಸಿಸಿ ನಾಯಕರ ತೀವ್ರ ವಾಗ್ದಾಳಿ
ನೆನಪಿನ ನಾಣ್ಯಗಳನ್ನು (Commemorative Coins) ವಿಶೇಷ ಘಟನೆಗಳು, ಇತಿಹಾಸ ಪುರುಷರು ಅಥವಾ ಮಹತ್ವದ ಸ್ಮಾರಕಗಳ ಗೌರವಾರ್ಥ ಬಿಡುಗಡೆ ಮಾಡಲಾಗುತ್ತದೆ. ಇವು ಸಾಮಾನ್ಯ ದಿನನಿತ್ಯದ ವಹಿವಾಟು ಹಾಗೂ ಚಲಾವಣೆಗೆ ಲಭ್ಯವಿರುವ ನಾಣ್ಯಗಳಲ್ಲ. ಸಂಗ್ರಾಹಕರು ಮತ್ತು ಸಾರ್ವಜನಿಕರು ಭಾರತ ಸರ್ಕಾರದ ಮಿಂಟ್ (India Government Mint) ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಈ ₹250 ನಾಣ್ಯವನ್ನು ಕಾಯ್ದಿರಿಸಿ ಖರೀದಿಸಬಹುದು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

