ಬೆಂಗಳೂರು: ಕರ್ನಾಟಕದಲ್ಲಿ ಒಂದರ ಹಿಂದೆ ಒಂದರಂತೆ ಅಗತ್ಯ ವಸ್ತುಗಳು ಹಾಗೂ ಸೇವೆಗಳ ದರ ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ. ಅದರಲ್ಲೂ, ಅಧಿಕಾರಕ್ಕೇರಲು ಘೋಷಿಸಿದ ಪಂಚ ಗ್ಯಾರಂಟಿಗಳಿಂದಾಗಿ ಭಾರೀ ಆರ್ಥಿಕ ಹೊಡೆತ ಅನುಭವಿಸಿದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಜೇಬು ಚೋರಿಗೆ ಇಳಿದಿದೆ ಎಂಬ ಜನಾಕ್ರೋಶ ವ್ಯಕ್ತವಾಗಿದೆ.
ಹಾಲು, ಮೊಸರು, ಬಸ್ ಟಿಕೆಟ್ ದರ, ಮೆಟ್ರೋ ದರ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಒಂದೆಡೆ, ಮಳೆ ಸರಿಯಾಗಿ ಆಗದೆ ಕೃಷಿ ಕೈಕೊಟ್ಟಿದ್ದು, ಸೂಕ್ತ ಬೆಲೆ ಪರಿಹಾರವನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ. ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ಇದೀಗ ಬೆಲೆ ಏರಿಸುವ ಮೂಲಕ ಇನ್ನಷ್ಟು ಕಷ್ಟಕ್ಕೆ ದೂಡಲಾಗಿದೆ.
ಬೆಲೆ ಏರಿಕೆಯ ಸುಳಿಯಲ್ಲಿ ಕರ್ನಾಟಕ ಸಿಲುಕಿರುವ ಬಗ್ಗೆ ಒಂದೆಡೆ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಜನಾಕ್ರೋಶವೂ ವ್ಯಕ್ತವಾಗುತ್ತಿದೆ.

ಇಲ್ಲಿದೆ ನೋಡಿ ಜನಾಭಿಪ್ರಾಯಗಳು
ಸಾಲಕೊಟ್ಟು ಚಕ್ರಬಡ್ಡಿ ವಸೂಲಿ ಮಾಡಿದಂತೆ, ಸರ್ಕಾರ ಉಚಿತ ಗ್ಯಾರಂಟಿಗಳನ್ನು ನೀಡಿ ಬೆಲೆ ಏರಿಕೆ ಮೂಲಕ ಚಕ್ರಬಡ್ಡಿ ಸೇರಿಸಿ ವಸೂಲಿ ಮಾಡುತ್ತಿದೆ. ಡಿಕೆ ಶಿವಕುಮಾರ್ ಅವರು ಬರಿ ಎಸ್.ಸಿ./ಎಸ್.ಟಿ, ಅಲ್ಪಸಂಖ್ಯಾತ ಮಾತ್ರವಲ್ಲದೆ ಎಲ್ಲಾ ಸಮುದಾಯಕ್ಕೂ ಅನ್ವಯವಾಗುವಂತೆ ಚಕ್ರಬಡ್ಡಿ ಸಾಲ ಕೊಟ್ಟಿದ್ದಾರೆ.

-ಭಾರತಿ ಸುಳ್ಯ
ಬೆವರಿನ ಹನಿಗೆ ಮಾತ್ರ ಗೊತ್ತು, ಒಂದು ತುತ್ತು ಅನ್ನದ ಬೆಲೆ ಎಷ್ಟು ಅಂತ. ಎಸಿ ರೂಮಿನಲ್ಲಿ ಕುಳಿತವರಿಗೆ ಜನಸಾಮಾನ್ಯರ ದಿನದ ದುಡಿಮೆಯ ಕಷ್ಟ ತಿಳಿಯದು. ರಾಜಕೀಯ ನಾಯಕರನ್ನು ಆಯ್ಕೆ ಮಾಡುವುದು ಜನಸಾಮಾನ್ಯರ ಕಷ್ಟಗಳನ್ನು ಬಗೆಹರಿಸಲೆಂದೇ ಹೊರತು, ಅವರ ಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಲು ಅಲ್ಲ. ಟೀ ಅಂಗಡಿಗಳಲ್ಲಿ ಬೆಲೆ ಏರಿಸುವುದರ ಜೊತೆಗೆ ಲೋಟದ ಸೈಜ್ ಸಣ್ಣದು ಮಾಡಲಾಗಿದೆ.

-ಪ್ರವೀಣ್ ಸುಳ್ಯ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತಂದಿರುವ ಉಚಿತ ಗ್ಯಾರಂಟಿ ಯೋಜನೆಗಳನ್ನು ನಡೆಸಲು ಹಣ ಹೊಂದಿಸಲು ಹಾಲು, ಬಸ್ ಟಿಕೆಟ್, ವಿದ್ಯುತ್ ಬಿಲ್ ಮತ್ತು ರಿಜಿಸ್ಟ್ರೇಷನ್ ಚಾರ್ಜ್ಗಳನ್ನೆಲ್ಲಾ ಏರಿಕೆ ಮಾಡುತ್ತಿದೆ. ಆದರೆ, ನಮಗೆ ಬರುವ ಸಂಬಳ ಅಥವಾ ಆದಾಯ ಮಾತ್ರ ಅಷ್ಟೇ ಇದೆ, ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಸಂಸಾರ ನಡೆಸುವುದು ತುಂಬಾ ಕಷ್ಟಕರವಾಗಿದೆ.
-ಪೊನ್ನಮ್ಮ, ವಿರಾಜಪೇಟೆ, ಕೊಡಗು
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಆಸೆ ತೋರಿಸಿ ಅಧಿಕಾರಕ್ಕೆ ಬಂದಿದ್ದು, ಅದನ್ನಾದರೂ ಸರಿಯಾಗಿ ಕೊಡೋದು ಬಿಟ್ಟು, ಹತ್ತಾರು ರೂಲ್ಸ್ ಹಾಕಿಕೊಂಡು ಜನರಿಗೆ ಸಿಗದಂತೆ ಮಾಡಿದೆ. ಹೀಗಿರುವಾಗ ಹಾಲು, ಮೊಸರು, ಬಸ್ ಟಿಕೆಟ್, ಮೆಟ್ರೋ ಪ್ರಯಾಣ ದರ ಇತ್ಯಾದಿ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿದ್ದರಿಂದ ಜನ ಸಾಮಾನ್ಯರು ಬದುಕುವುದು ಹೇಗೆ? ರಾಜ್ಯದ ಅಭಿವೃದ್ಧಿ ಕಥೆ ಹೇಳೋದೇ ಬೇಡವಾಗಿದೆ. ಇದರ ಮಧ್ಯೆ ಸ್ಟಿಂಗ್ ಆಪರೇಷನ್ ಅಂತೆ, ಸ್ವಲ್ಪ ಆದ್ರೂ ಸರ್ಕಾರ ಜನರ ಬಗ್ಗೆ ಯೋಚನೆ ಮಾಡಲಿ.
-ಲಕ್ಷ್ಮಣ್ ಹರಿಜನ್, ಮುಂಡಗೋಡ
ಇದನ್ನೂ ಓದಿ: ಕೆಎಸ್ಆರ್ಟಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ: ಗರಿಷ್ಠ 9 ರೂಪಾಯಿ ಬಸ್ ಟಿಕೆಟ್ ದರ ಹೆಚ್ಚಳ
ಮಧ್ಯಮವರ್ಗಕ್ಕೆ ನುಂಗಲಾರದ ತುತ್ತಾದ ಬೆಲೆ ಏರಿಕೆ
ಕರ್ನಾಟಕದಲ್ಲಿ ನಂದಿನಿ ಹಾಲು ಮತ್ತು ಮೊಸರು ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆಗಳು ಹಾಗೂ ಬಸ್ ಪ್ರಯಾಣ ದರವು ಏರಿಕೆಯಾಗಿದೆ. ಈ ಸರ್ಕಾರದ ಗ್ಯಾರಂಟಿಗಳಿಗಾಗಿ ಜನರು ಬೆಲೆ ತೆರಬೇಕಾಗಿದೆ. ಬೆಲೆ ಏರಿಕೆ ಮಧ್ಯಮ ವರ್ಗದ ಜನರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹೀಗಾಗಿ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ ಅಗತ್ಯ ಕ್ರಮಗಳಿಗೆ ಸರ್ಕಾರ ಒತ್ತು ನೀಡಬೇಕು.
-ಸಾಯಿನಂದಾ, ಉಡುಪಿ
ಯಾರು ಬಯಸದಿದ್ದರೂ, ಅಧಿಕಾರದ ಆಸೆಗೆ ಗ್ಯಾರಂಟಿಗಳ ಆಮಿಷವಿತ್ತವರು ನೀವೇ (ಕಾಂಗ್ರೆಸ್) ಅಲ್ಲವೇ? ಗ್ಯಾರಂಟಿ ನಮಗೇನು ಕೊಡಲಿಲ್ಲವೆಂದು ಹೇಳುವ ಹಾಗಿಲ್ಲ; ತೆರಿಗೆ, ಬೆಲೆ ಏರಿಕೆ, ರಾಜ್ಯದ ಸಾಲದ ಹೊರೆಗಳನ್ನೂ ಕೊಟ್ಟಿದ್ದೀರಲ್ಲ! ಗ್ಯಾರಂಟಿ ನಿಮ್ಮದು, ಹೊರೆ ನಮ್ಮದು, ಅಧಿಕಾರ ನಿಮ್ಮದು, ಸಂಕಷ್ಟ ಜನ ಸಾಮಾನ್ಯರದ್ದು.
-ದಿನೇಶ್ ಸಾಲ್ಯಾನ್ ಬೊಲ್ತೆರ್
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ಇದರ ಭಾರವನ್ನು ಕೊನೆಗೆ ಸಾಮಾನ್ಯ ಜನರಿಗೇ ಹೊರಿಸಲಾಗುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ, ತೆರಿಗೆಗಳ ಒತ್ತಡ ಮತ್ತು ಜೀವನ ವೆಚ್ಚದ ಹೆಚ್ಚಳ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಉಚಿತ ಯೋಜನೆಗಳು ತಾತ್ಕಾಲಿಕ ಪರಿಹಾರ ನೀಡಬಹುದು, ಆದರೆ ಶಾಶ್ವತ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಬೆಳವಣಿಗೆ ಮುಖ್ಯ. ಜನರಿಗೆ ಉಚಿತ ಕೊಡುವುದಕ್ಕಿಂತ ಸ್ವಾವಲಂಬಿಯಾಗಿ ಬದುಕುವ ಅವಕಾಶಗಳನ್ನು ಸರ್ಕಾರ ಕಲ್ಪಿಸಬೇಕು. ಇಲ್ಲದಿದ್ದರೆ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ದೀರ್ಘಕಾಲದ ಹೊರೆ ಬೀಳುವ ಅಪಾಯವಿದೆ.
-ಜಿತೇಶ್ ಎ., ರಾಮಕುಂಜ
ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಬಿದ್ದಿದೆ. ರಾಜ್ಯದ ಸಾಲದಲ್ಲೂ ಏರಿಕೆಯಾಗಿದೆ. ಹಾಲು, ಸಾರಿಗೆ ಸೇರಿದಂತೆ ಹಲವಾರು ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಇದರಿಂದ ಮಧ್ಯಮ ವರ್ಗದ ಜನರ ಪರದಾಡುವಂತಾಗಿದೆ. ಕೃಷಿಯಾತ್ರೆ ಚಟುವಟಿಕೆಗಳಿಗೆ ಸಿಗುತ್ತಿದ್ದ ಸಬ್ಸಿಡಿಗಳು ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿ ನಿರುದ್ಯೋಗ, ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.
-ಹೇಮಂತ್ ಕುಮಾರ್, ವಿದ್ಯಾರ್ಥಿ, ಜೆ.ಟಿ. ಕಾಲೇಜು, ಗದಗ
ಒಂದು ಕೈಯಲ್ಲಿ ಉಚಿತ ಯೋಜನೆಗಳ ಹಣ ಕೊಟ್ಟು, ಇನ್ನೊಂದು ಕೈಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸಿದರೆ ಸಾಮಾನ್ಯ ಜನರು ಬದುಕುವುದಾದರೂ ಹೇಗೆ? ಗ್ಯಾರಂಟಿ ಕೊಡುವುದು ದೊಡ್ಡ ಸಾಧನೆಯಲ್ಲ, ಕೊಟ್ಟ ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿ ನಿಂತುಹೋಗಬಾರದು. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು, ಉದ್ಯೋಗಾವಕಾಶಗಳು ಸುಧಾರಿಸಬೇಕು. ಏರಿದ ಬೆಲೆ ಇಳಿಕೆಯಾಗಬೇಕು. ಜನರಿಗೆ ಉಚಿತ ಸೌಲಭ್ಯಗಳಿಗಿಂತ ಸ್ವಂತ ದುಡಿಮೆಯಿಂದ ನೆಮ್ಮದಿಯಾಗಿ ಬದುಕುವ ಅವಕಾಶ ಮುಖ್ಯ.
ಜನರಿಗೆ ಗ್ಯಾರಂಟಿ ಬೇಡ ಎನ್ನುವುದಲ್ಲ, ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆಯ ಬರೆ ಹಾಕಬೇಡಿ.
-ಅಕ್ಷತಾ ಕೆ., ದಾಸಕೋಡಿ
ರಾಜ್ಯ ಸರ್ಕಾರ ಉಚಿತ ಯೋಜನೆಗಳನ್ನು ಪ್ರಾರಂಭಿಸಿ ನಮ್ಮನ್ನು ಮೂಢಜನರಾಗಿ ಮಾಡಿದ್ದಾರೆ. ಯಾವುದನ್ನು ಉಚಿತವಾಗಿ ಕೊಡಬೇಕೋ ಅದನ್ನು ಕೊಡಲಿಲ್ಲ. ವೈದಿಕೀಯ ರಂಗದಲ್ಲಿ ಕೆಲವೊಂದು ಚಿಕಿತ್ಸೆಗಳನ್ನು ಉಚಿತವಾಗಿ ಕೊಡಬಹುದಿತ್ತು ಅಥವಾ ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುವ ಅವಕಾಶವನ್ನಾದರೂ ಉಚಿತವಾಗಿ ಕೊಡಬಹುದಿತ್ತು ಅಥವಾ ಅಂಗವಿಕಲರಿಗೆ ಇಲ್ಲವಾದಲ್ಲಿ ವೃದ್ಧಾಶ್ರಮಗಳಿಗೆ ಯಾವುದಾದರು ಸರ್ಕಾರಗಳಿಂದ ಯೋಜನೆಯನ್ನು ಮಾಡಬಹುದಿತ್ತು. ಆದರೆ ನಮ್ಮ ರಾಜ್ಯ ಸರ್ಕಾರ ಜನರನ್ನು ಆಕರ್ಷಿಸಲು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ 2000 ಖಾತೆಗೆ ಬರುತ್ತದೆ ಎಂದು ಜನರನ್ನು ನಂಬಿಸಿ ಮೂರ್ಖರನ್ನಾಗಿಸಿದೆ. ನಮ್ಮ ತೆರಿಗೆ ಹಣವನ್ನೇ ವಾಪಸ್ ನಮಗೆ ಗ್ಯಾರಂಟಿ ಮೂಲಕ ಕೊಡುತ್ತಿದ್ದರೆ ಎನ್ನುವ ವಿಚಾರ ಮುಗ್ದ ಜನರಿಗೆ ತಿಳಿದಿಲ್ಲ. ಕೆಲವೊಂದು ಉಚಿತ ಯೋಜನೆಗಳಿಂದ ನಮ್ಮ ಸರ್ಕಾರ ಸಾಲದ ಸರ್ಕಾರವಾಗಿದೆ ಹಾಗೂ ಸಾಲ ಜಾಸ್ತಿ ಮಾಡಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಜ್ಯದ ಜನರನ್ನು ಬಕ್ರ ಮಾಡುತ್ತಿದ್ದಾರೆ. ನಾವೆಲ್ಲ ವಿದ್ಯಾವಂತರಾಗಿದ್ದೇವೆ. ಮುಂದಿನ ಬಾರಿ ಒಂದು ಒಳ್ಳೆ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಮ್ಮ ರಾಜ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ.
-ಸಂಚಿತ್ ಶೆಟ್ಟಿ, ಬೆಂಗಳೂರು
ಗ್ಯಾರಂಟಿ ಕೊಡುತ್ತೇವೆ ಎಂದು ಜನರನ್ನು ಯಾಮಾರಿಸಿದ್ರು. ಈವಾಗ ಹಾಲು, ಸಕ್ಕರೆ ಎಲ್ಲದರ ಬೆಲೆ ಏರಿಕೆ ಮಾಡ್ತಿದ್ದಾರೆ. ಒಂದು ಕಡೆ ಫ್ರೀ ಅಂತ ಹೇಳೋದು, ಮತ್ತೊಂದು ಕಡೆ ಬೆಲೆ ಏರಿಸೋದು. ನಮ್ಮ ಟ್ಯಾಕ್ಸ್ ಹಣ ಎಲ್ಲಿ ಹೋಯ್ತು? ಈ ಸರ್ಕಾರ ತೊಲಗಿದ್ರೆ ಸಾಕು ಅನ್ನೋ ತರ ಆಗಿದೆ.
-ವಿಜಯಾ ಮಾದರ್, ಯಲ್ಲಾಪುರ
ರಾಜ್ಯ ಸರ್ಕಾರದ ನಿರ್ಧಾರದಿಂದ ಸಾಮಾನ್ಯ ಜನರಿಗೆ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ, ರಾಜ್ಯದ ಜನತೆ ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದಾರೆ. ಈ ನಡುವೆ ಹಾಲು- ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ಹೊಡೆತ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೊಂದೆಡೆ, ದೀಪಾವಳಿ ಹಬ್ಬದ ಸಂಭ್ರಮದ ತಯಾರಿಯಲ್ಲಿದ್ದ ಜನರಿಗೆ ಬಸ್ ಟಿಕೆಟ್ ದರ ಹೆಚ್ಚಿಸಿರುವುದು ನುಂಗಲಾಗದ ಬಿಸಿ ತುಪ್ಪದಂತಾಗಿದೆ.
-ಅಶ್ವಿನಿ ಕೆ.ಎಸ್. ಮಡಿಕೇರಿ
ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯು ಪ್ರಸ್ತುತ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ತೀವ್ರವಾದ ಆರ್ಥಿಕ ಒತ್ತಡವನ್ನು ಉಂಟುಮಾಡಿದೆ. ಸರ್ಕಾರ ಒಂದೆಡೆ ಗ್ಯಾರಂಟಿ ಯೋಜನೆಗಳ ಮೂಲಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದರೂ, ಮತ್ತೊಂದೆಡೆ ಅನಿವಾರ್ಯವಾಗಿ ಅಗತ್ಯ ಸೇವೆಗಳ ಬೆಲೆ ಏರಿಸಿದೆ. ಇದು ಸಾರ್ವಜನಿಕರಲ್ಲಿ ಒಂದಷ್ಟು ಅಸಮಾಧಾನ ಮೂಡಿಸಿದೆ. ಹಾಲು, ಮೊಸರು, ದಿನಸಿ ಹಾಗೂ ಸಾರಿಗೆ ದರಗಳು ಒಟ್ಟೊಟ್ಟಿಗೇ ಹೆಚ್ಚಿರುವುದರಿಂದ ಪ್ರತಿಯೊಂದು ಕುಟುಂಬಕ್ಕೂ ಹೊರೆ ಎಂದೇ ಹೇಳಬಹುದು.
-ಪುಷ್ಪಾ ಕಾರ್ಕಳ
ಕರ್ನಾಟಕದಲ್ಲಿ ಬೆಲೆ ಏರಿಸಿ ದೇಶದ ಎಲ್ಲಾ ಕಡೆಯ ಚುನಾವಣೆಗೆ ಫಂಡ್ ಮಾಡುವ ಪ್ಲಾನ್ ಎನಿಸುತ್ತಿದೆ. ಕರ್ನಾಟಕದ ಜನತೆಯನ್ನು ಪೂರ್ಣ ದೋಚುವ ಸಂಚು ಇದಾಗಿದೆ.
-ಪ್ರಸಾದ್ ಕುಮಾರ್, ಕುಂಟಿಕಾನ, ಪುತ್ತೂರು
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

