ಕೇವಲ ‘ಒಂದೇ ಒಂದು’ ತಲೆಗೂದಲಿನಿಂದ ಸಿಕ್ಕಿಬಿದ್ದ ಕೊಲೆಗಾರ: ತುಮಕೂರಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮಹಿಳಾ ನ್ಯಾಯಾಧೀಶೆ

ತುಮಕೂರು: ಅಪರಾಧ ಎಷ್ಟೇ ಚಾಣಾಕ್ಷತನದಿಂದ ಕೂಡಿದ್ದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ತುಮಕೂರಿನಲ್ಲಿ ನಡೆದ ಈ ಕೊಲೆ ಪ್ರಕರಣವೇ ಸಾಕ್ಷಿ. ಕೊಲೆಯಾದ ಸ್ಥಳದಲ್ಲಿ ಸಿಕ್ಕ ಕೇವಲ ಒಂದೇ ಒಂದು ತಲೆಗೂದಲಿನ (Hair Strand) ವೈಜ್ಞಾನಿಕ ಸಾಕ್ಷ್ಯದ ಆಧಾರದ ಮೇಲೆ, ಭೀಕರ ಕೊಲೆ ಪ್ರಕರಣದ ಅಪರಾಧಿಗೆ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ತುಮಕೂರಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (Sessions Court) ನ್ಯಾಯಾಧೀಶರಾದ ನರಸಮ್ಮ ಅವರು ಈ ಐತಿಹಾಸಿಕ ತೀರ್ಪನ್ನು ನೀಡಿದ್ದು, ಶಿವಕುಮಾರ್ ಶಿಕ್ಷೆಗೊಳಗಾದ ಕಟುಕನಾಗಿದ್ದಾನೆ.

ಪ್ರಕರಣದ ಹಿನ್ನೆಲೆಯ ಪ್ರಕಾರ, 2021ರಲ್ಲಿ ತುಮಕೂರಿನ ಪ್ರಸಿದ್ಧ ಅಮಾನಿಕೆರೆ ಬಳಿಯ ಫುಟ್‌ಪಾತ್ ಮೇಲೆ ಮಂಜುನಾಥ್ ಎಂಬ ವ್ಯಕ್ತಿಯ ಶವ ರಕ್ತಸಿಕ್ತವಾಗಿ ಪತ್ತೆಯಾಗಿತ್ತು. ಮದ್ಯದ ನಶೆಯಲ್ಲಿದ್ದ ಅಪರಾಧಿ ಶಿವಕುಮಾರ್ ಮಂಜುನಾಥ್‌ನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಮೃತ ಮಂಜುನಾಥ್‌ನ ಕೈಯಲ್ಲಿ ಒಂದು ತಲೆಗೂದಲು ಸಿಲುಕಿಕೊಂಡಿರುವುದು ಹಾಗೂ ರಕ್ತಸಿಕ್ತವಾದ ಶರ್ಟ್ ಪೀಸ್ ಬಿದ್ದಿರುವುದು ಪತ್ತೆಯಾಗಿತ್ತು. ಕೊಲೆಯಾಗುವ ಮುನ್ನ ಮಂಜುನಾಥ್ ತನ್ನ ಪ್ರಾಣ ಉಳಿಸಿಕೊಳ್ಳಲು ಹಂತಕನೊಂದಿಗೆ ತೀವ್ರವಾಗಿ ಜಗಳವಾಡಿರುವುದು ಇದರಿಂದ ಸಾಬೀತಾಗಿತ್ತು.

ಪೊಲೀಸರು ತನಿಖೆ ಕೈಗೊಂಡು ಅನುಮಾನದ ಮೇಲೆ ಶಿವಕುಮಾರ್‌ನನ್ನು ವಶಕ್ಕೆ ಪಡೆದಿದ್ದರು. ತನಿಖಾಧಿಕಾರಿಗಳು ಕೊಲೆಯಾದ ಮಂಜುನಾಥ್ ಕೈಯಲ್ಲಿ ಸಿಕ್ಕಿದ್ದ ಆ ಒಂದೇ ಒಂದು ತಲೆಗೂದಲು ಮತ್ತು ಆರೋಪಿ ಶಿವಕುಮಾರ್‌ನ ತಲೆಗೂದಲನ್ನು ಅತ್ಯಾಧುನಿಕ ಡಿಎನ್‌ಎ (DNA Test) ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಟ್ಟಿದ್ದರು.

ಲ್ಯಾಬ್‌ನಿಂದ ಬಂದ ವೈಜ್ಞಾನಿಕ ವರದಿಯು ಇಡೀ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿತು. ಮೃತನ ಕೈಯಲ್ಲಿದ್ದ ಕೂದಲು ಮತ್ತು ಆರೋಪಿ ಶಿವಕುಮಾರ್‌ನ ಡಿಎನ್‌ಎ ಎರಡೂ ನೂರಕ್ಕೆ ನೂರರಷ್ಟು ಒಂದೇ ಎಂದು ವರದಿಯಲ್ಲಿ ದೃಢಪಟ್ಟಿತ್ತು. ಈ ಒಂದೇ ಒಂದು ವೈಜ್ಞಾನಿಕ ಸಾಕ್ಷ್ಯವು ಪೊಲೀಸರಿಗೆ ಕೋರ್ಟ್‌ನಲ್ಲಿ ಭದ್ರ ಬುನಾದಿ ಒದಗಿಸಿತು.

ಇದನ್ನೂ ಓದಿ: ಲೋಕಾ ಬಲೆಗೆ ಬಿದ್ದಿದ್ದ ಅಫಜಲಪುರ ಮಾಜಿ ತಹಶೀಲ್ದಾರ್‌ಗೆ ಜೈಲು ಭಾಗ್ಯ: ಶಶಿಕಲಾ ಪಾದಗಟ್ಟಿಗೆ 4 ವರ್ಷ ಕಠಿಣ ಶಿಕ್ಷೆ, 20 ಸಾವಿರ ದಂಡ

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಹಿರಿಯ ಅಭಿಯೋಜಕಿ (Public Prosecutor) ಕವಿತಾ ಅವರು ಮೃತನ ಪರವಾಗಿ ಅತ್ಯಂತ ಪ್ರಬಲವಾಗಿ ವಾದ ಮಂಡಿಸಿ, ವೈಜ್ಞಾನಿಕ ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಇಟ್ಟಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನರಸಮ್ಮ ಅವರು, ಅಪರಾಧಿ ಶಿವಕುಮಾರ್‌ಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ. ಇದರೊಂದಿಗೆ, ಮಗನನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಮೃತ ಮಂಜುನಾಥ್‌ನ ವೃದ್ಧ ತಾಯಿಗೆ ಕಾನೂನಿನ ಅನ್ವಯ ಸೂಕ್ತ ಪರಿಹಾರದ ಮೊತ್ತವನ್ನು ಒದಗಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *