41 ವಾರೆಂಟ್ ಜಾರಿಯಾಗಿದ್ದರೂ ಸಿಗದ ಹಳೇ ಕಿಲ್ಲರ್; ಕೇರಳದಲ್ಲಿ ಪುತ್ತೂರು ಪೊಲೀಸರ ‘ಖೆಡ್ಡಾ ಆಪರೇಷನ್’

ಪುತ್ತೂರು: ಕಾನೂನಿನ ಕಣ್ಣಿಗೆ ಮಣ್ಣೆರಚಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಮೋಸ್ಟ್ ವಾಂಟೆಡ್ ದರೋಡೆಕೋರನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆ ಪೊಲೀಸರು ಅಸಾಧಾರಣ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿಯಾದ ನೆಲ್ಸನ್ ಸಿ.ವಿ. (38) ಬಂಧಿತ ಕುಖ್ಯಾತ ಆರೋಪಿಯಾಗಿದ್ದಾನೆ. ಆತನ ವಿರುದ್ಧ ನ್ಯಾಯಾಲಯದಿಂದ ಬರೋಬ್ಬರಿ 41 ಬಂಧನ ವಾರೆಂಟ್‌ಗಳು (Arrest Warrants) ಜಾರಿಯಾಗಿದ್ದರೂ ಸಿಗದೆ ಹೆದರಿಸುತ್ತಿದ್ದವನು ಕೊನೆಗೂ ಪುತ್ತೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

2017ರ ಆ ಪಿಸ್ತೂಲ್ ದರೋಡೆ ಪ್ರಕರಣವೇನು?:

ಪೊಲೀಸ್ ಮೂಲಗಳ ಪ್ರಕಾರ, ಈ ನೆಲ್ಸನ್ ಹಳೇ ಖತರ್ನಾಕ್ ದರೋಡೆಕೋರ. 2017ರ ಡಿಸೆಂಬರ್ 22 ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಈತ ತನ್ನ ಇಬ್ಬರು ಸಹಚರರೊಂದಿಗೆ ನುಗ್ಗಿದ್ದ. ಮನೆಯವರ ನೆತ್ತಿಗೆ ಪಿಸ್ತೂಲ್ ಇಟ್ಟು, ಚಾಕು ತೋರಿಸಿ ಜೀವಬೆದರಿಕೆ ಒಡ್ಡಿದ್ದ ಈ ದರೋಡೆಕೋರರ ಗ್ಯಾಂಗ್, ಮನೆಯಲ್ಲಿದ್ದ 2.9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 60,000 ರೂ. ನಗದು ದೋಚಿ ಜಾಗ ಖಾಲಿ ಮಾಡಿತ್ತು. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಗಂಭೀರ ದರೋಡೆ ಪ್ರಕರಣ ದಾಖಲಾಗಿತ್ತು.

ಜಾಮೀನು ಪಡೆದು ಕೋರ್ಟ್‌ಗೇ ನಾಮ ಹಾಕಿದ್ದ ನೆಲ್ಸನ್!

ಈ ದರೋಡೆ ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ನೆಲ್ಸನ್‌ನನ್ನು ಕಷ್ಟಪಟ್ಟು ಬಂಧಿಸಿದ್ದರು. ಆದರೆ, ಕೆಲ ದಿನಗಳ ಬಳಿಕ ಆತ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು (Bail) ಪಡೆದು ಜೈಲಿನಿಂದ ಹೊರಬಂದಿದ್ದ. ಆದರೆ, 2021ರ ಆಗಸ್ಟ್ 27 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆತ ನಿರಂತರವಾಗಿ ತಲೆಮರೆಸಿಕೊಂಡಿದ್ದ. ಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಓಡಿಹೋಗಿದ್ದ ಹಿನ್ನೆಲೆಯಲ್ಲಿ ಕೋಪಗೊಂಡ ನ್ಯಾಯಾಲಯವು ಆತನ ವಿರುದ್ಧ 1, 2 ಅಲ್ಲ.. ಬರೋಬ್ಬರಿ 41 ಪ್ರತ್ಯೇಕ ಬಂಧನ ವಾರೆಂಟ್‌ಗಳನ್ನು ಜಾರಿಗೊಳಿಸಿತ್ತು.

ವಾರೆಂಟ್ ಹಕ್ಕಿಯ ಪತ್ತೆಗಾಗಿ ಪುತ್ತೂರು ಪೊಲೀಸರು ವಿಶೇಷ ಸ್ಕೆಚ್ ಹಾಕಿದ್ದರು. ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಎ., ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ವಿನಾಯಕ ಮತ್ತು ಶಿವರಾಜ್ ಅವರನ್ನೊಳಗೊಂಡ ಖದೀಮರ ಬೇಟೆ ತಂಡವೊಂದು ರಚನೆಯಾಗಿತ್ತು. ಈ ಹೈಟೆಕ್ ತಂಡವು ಆರೋಪಿಯ ಡಿಜಿಟಲ್ ಸುಳಿವು ಹಾಗೂ ನೆಟ್‌ವರ್ಕ್ ಬೆನ್ನಟ್ಟಿ ನೇರವಾಗಿ ಕೇರಳದ ತ್ರಿಶೂರ್ ಜಿಲ್ಲೆಯ ಮಿಯೂರ್‌ಗೆ ಲಗ್ಗೆ ಇಟ್ಟಿತ್ತು. ಅಲ್ಲಿ ಅತ್ಯಂತ ರಹಸ್ಯವಾಗಿ ಅಡಗಿ ಕುಳಿತಿದ್ದ ನೆಲ್ಸನ್‌ನನ್ನು ಪೊಲೀಸರು ಬುಧವಾರದಂದು ಸಿನಿಮಾ ಸ್ಟೈಲ್‌ನಲ್ಲಿ ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:Crime : ಪತ್ನಿಯನ್ನು ಹೂತ ಜಾಗದಲ್ಲೇ ನಾಯಿಯ ಶವವನ್ನು ಹೂತು ಯಾಮಾರಿಸಿದ ಪಾಪಿ ಪತಿ

ಬಂಧಿತ ಆರೋಪಿಯನ್ನು ಸದ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಕೇವಲ ಹಳೇ ಕೇಸ್ ಮಾತ್ರವಲ್ಲದೆ, ನ್ಯಾಯಾಲಯ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ವ್ಯವಸ್ಥೆಗೆ ವಂಚಿಸಿ ಓಡಿಹೋಗಿದ್ದಕ್ಕಾಗಿ ಆತನ ವಿರುದ್ಧ ಈಗ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 269 ರ ಅಡಿಯಲ್ಲಿ ಮತ್ತೊಂದು ಹೊಸ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ. ಪುತ್ತೂರು ಪೊಲೀಸರ ಈ ಸಮಯಪ್ರಜ್ಞೆ ಮತ್ತು ದಕ್ಷ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *