ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 25ನೇ ವಾರ್ಷಿಕ ಮಹಾಸಭೆ ಸೆ.6ರಂದು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದ್ದು, ವಾರ್ಷಿಕ 800 ಕೋಟಿ ರೂ. ದಾಖಲೆಯ ವ್ಯವಹಾರ ದಾಖಲಿಸಿದೆ. ಸಂಘದ ಈ ಪ್ರಗತಿಗೆ ಸದಸ್ಯರು ಹಾಗೂ ನಿರ್ದೇಶಕರ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ತಾನು ಬೆಳೆಯಲು ಶ್ರೀ ಸರಸ್ವತಿ ಸಹಕಾರಿ ಸಂಘವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದ ಅವರು, ಸ್ಟಾಂಪ್ ಪೇಪರ್‌ಗಾಗಿ ಸಾರ್ವಜನಿಕರು ದೀರ್ಘಕಾಲ ಕಾಯಬೇಕಾಗುತ್ತಿದ್ದ ಸಮಸ್ಯೆಯನ್ನು ಮನಗಂಡು, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಇ-ಸ್ಟ್ಯಾಂಪ್ ಸೌಲಭ್ಯವನ್ನು ಕಲ್ಪಿಸಿದ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಶ್ರೀ ಸರಸ್ವತಿಗೆ ಇದೆ ಎಂದರು.
ಸಂಘದ ಮುಖ್ಯ ಕಚೇರಿಗಾಗಿ ಸ್ವಂತ ನಿವೇಶನ ನಿರ್ಮಿಸುವ ಉದ್ದೇಶ ಹೊಂದಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ಮಾರ್ಚ್ ವೇಳೆಗೆ 1,000 ಕೋಟಿ ರೂ. ವ್ಯವಹಾರದ ಗುರಿ ಹೊಂದಲಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಸದಸ್ಯರು ಮತ್ತಷ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕೇರಳದಲ್ಲೂ ಒಂದು ಶಾಖೆ ಆರಂಭಿಸುವಂತೆ ಒತ್ತಾಯಗಳು ಬರುತ್ತಿರುವುದನ್ನು ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು, ವಿವಿಧ ಸಂಸ್ಥೆಗಳಿಗೆ ದೇಣಿಗೆ, ವೈದ್ಯಕೀಯ ನೆರವು, ವಿದ್ಯಾರ್ಥಿವೇತನ, ಅಬಲರಿಗೆ ಆರ್ಥಿಕ ನೆರವು ಹಾಗೂ ಸೇವಾ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಘದ ವತಿಯಿಂದ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಯುವ ಸಬಲೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 2 ಕೋಟಿ ರೂ. ಮೊತ್ತದ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸೌಹಾರ್ದ ಸಹಕಾರಿಯಾಗಿ ನೋಂದಣಿಗೊಂಡ ಶ್ರೀ ಸರಸ್ವತಿ ಸಹಕಾರಿ ಸಂಘವು ನಿರಂತರ ಪ್ರಗತಿಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೌಹಾರ್ದ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.
ಸಂಘದ ಪ್ರಧಾನ ವ್ಯವಸ್ಥಾಪಕ ವಸಂತ ನಾಯಕ್ ಎ. ಅವರು 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದರು. ಇದೇ ವೇಳೆ ಸದಸ್ಯರಿಂದ ಸಲಹೆ ಹಾಗೂ ಸೂಚನೆಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ನಿರ್ದೇಶಕರು ಹಾಗೂ ನಿವೃತ್ತ ವ್ಯವಸ್ಥಾಪಕರನ್ನು ಗೌರವಿಸಲಾಯಿತು.
ಇದನ್ನೂ ಓದಿ: ಸಿದ್ದಕಟ್ಟೆಯಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 23ನೇ ಶಾಖೆ ಉದ್ಘಾಟನೆ
ಸಂಘದ ಉಪಾಧ್ಯಕ್ಷ ಉಮೇಶ್ ಪ್ರಭು ಕೆ., ನಿರ್ದೇಶಕರಾದ ರಾಜಗೋಪಾಲ ಬಾಳೆಗೊಳಿ, ಕೆ. ಹರೀಶ್ ಬೋರ್ಕರ್, ವಸಂತ ಶಂಕರ್, ವೇದವ್ಯಾಸ ಕಟ್ಟೆ, ರವೀಶ್ ಪೊಸವಳಿಕೆ, ದಯಾನಂದ ನಾಯಕ್, ಚಂದ್ರಶೇಖರ್ ಭಟ್, ಸಂಜೀವ ನಾಯಕ್, ದೇವಕಿ ಹರೀಶ್, ರಂಜಿತ ಪ್ರಭು, ಉಮೇಶ್ ಪ್ರಭು, ವೃತ್ತಿಪರ ನಿರ್ದೇಶಕರಾದ ಪುಷ್ಪಲತಾ ಎನ್., ಅನಂತಕೃಷ್ಣ ಪಿ., ಲೆಕ್ಕಪರಿಶೋಧಕ ಚಂದ್ರಶೇಖರ್ ಎ.ಜಿ. ಉಪಸ್ಥಿತರಿದ್ದರು.
ವಿದುಷಿ ವೈಷ್ಣವಿ ನಾಯಕ್ ಹಾಗೂ ಶ್ರೀರಂಜಿತ ವಂದೇ ಮಾತರಂ ಗೀತೆ ಹಾಡಿದರು. ಪ್ರಧಾನ ವ್ಯವಸ್ಥಾಪಕ ವಸಂತ ನಾಯಕ್ ಎ. ಸ್ವಾಗತಿಸಿ, ವಿದುಷಿ ವೈಷ್ಣವಿ ವಂದಿಸಿದರು.
ಸ್ವರಸಂಗಮ ಕಾರ್ಯಕ್ರಮ
ಮಹಾಸಭೆಗೂ ಮುನ್ನ ‘ರಿಸೋನೆನ್ಸ್ ದಿ ಮ್ಯೂಸಿಕ್ ಬ್ಯಾಂಡ್’ ವತಿಯಿಂದ ‘ಸ್ವರಸಂಗಮ’ ಕಾರ್ಯಕ್ರಮ ನಡೆಯಿತು. ಕೆ. ಸಾತ್ವಿಕ್ ಪ್ರಭು ಬಾನ್ಸುರಿ, ನಾಗಶಯನ ಮೂಡಂಬೈಲ್ ವಯಲಿನ್, ಶರಣ್ ಪೆರ್ಲ ತಬಲಾ ಹಾಗೂ ಗುರುರಾಜ್ ಉಡುಪಿ ಕೀಬೋರ್ಡ್ ನುಡಿಸಿದರು. ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಕ್ರಮ ಸಂಯೋಜಕ ಬಿಪಿನ್ ಚಂದ್ರ ಬಿ.ಡಿ. ಕಾರ್ಯಕ್ರಮ ನಿರೂಪಿಸಿದರು.

