ಶೆನ್ಝೆನ್: ನಮ್ಮ ಕೈಗೆ ಸಿಗದ ಬೆನ್ನಿನ ಮಧ್ಯ ಭಾಗದಲ್ಲಿ ತುರಿಕೆ ಉಂಟಾದಾಗ ಅದನ್ನು ತೀರಿಸಿಕೊಳ್ಳಲು ಪರದಾಡುವುದು ಸಾಮಾನ್ಯ. ಆದರೆ, ಈ ಸಣ್ಣ ಹಾಗೂ ದೈನಂದಿನ ಕಿರಿಕಿರಿಯನ್ನೇ ಬೃಹತ್ ಉದ್ಯಮವನ್ನಾಗಿ ಪರಿವರ್ತಿಸಿ, ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಚೀನಾದ ಶೆನ್ಝೆನ್ ನಗರದ 32 ವರ್ಷದ ಉದ್ಯಮಿ ಜಾಂಗ್ ಶಿಯಾವೊಖಿಯಾವೊ (Zhang Xiaoqiao), ಕೇವಲ ಸಾರ್ವಜನಿಕರ ‘ಬೆನ್ನು ತುರಿಸುವಿಕೆ’ಗೆಂದೇ (Back Scratching) ಪ್ರತ್ಯೇಕ ‘ಸ್ಪಾ’ ತೆರೆದು ಜಗತ್ತಿನ ಗಮನ ಸೆಳೆದಿದ್ದಾರೆ.
‘ಸುಮಾ’ ಹೆಸರಿನ ಈ ಸ್ಪಾಗೆ ಆಗಮಿಸುವ ಗ್ರಾಹಕರು ಮಂಚದ ಮೇಲೆ ಮಲಗಿದರೆ ಸಾಕು. ತರಬೇತಿ ಪಡೆದ ಸಿಬ್ಬಂದಿಗಳು ವಿಶೇಷವಾಗಿ ವಿನ್ಯಾಸಗೊಳಿಸಿದ ಚೂಪಾದ ನಖಗಳಂತಹ ಸಾಧನಗಳಿಂದ ಗ್ರಾಹಕರ ಬೆನ್ನನ್ನು ತುರಿಸಿ ಹಿತಕರ ಅನುಭವ ನೀಡುತ್ತಾರೆ. ಈ ಸೇವೆಗಾಗಿ ಗ್ರಾಹಕರು ಪ್ರತಿ ಗಂಟೆಗೆ 300 ಯುವಾನ್ (ಸುಮಾರು 4,000 ರೂ.ಕ್ಕಿಂತ ಹೆಚ್ಚು) ಪಾವತಿಸುತ್ತಾರೆ. ಪ್ರಸ್ತುತ ಜಾಂಗ್ ಅವರು ಎರಡು ಕೇಂದ್ರಗಳನ್ನು ನಡೆಸುತ್ತಿದ್ದು, ತಿಂಗಳಿಗೆ ಸುಮಾರು 1,00,000 ಯುವಾನ್ (ಸುಮಾರು 14 ಲಕ್ಷ) ಆದಾಯ ಗಳಿಸುತ್ತಿದ್ದಾರೆ.
ಕಾರ್ಪೊರೇಟ್ ಒತ್ತಡ ಹಾಗೂ ಸದಾ ತಂತ್ರಜ್ಞಾನದ ಕೆಲಸದಲ್ಲಿ ನಿರತರಾಗಿರುವ ನಗರವಾಸಿಗಳಿಗೆ ತಕ್ಷಣದ ವಿಶ್ರಾಂತಿ ನೀಡಲು ಜಾಂಗ್ ಈ ಐಡಿಯಾ ಹುಡುಕಿದರು. ಕಾರ್ಪೊರೇಟ್ ಒತ್ತಡ ಹಾಗೂ ಸದಾ ತಂತ್ರಜ್ಞಾನದ ಕೆಲಸದಲ್ಲಿ ನಿರತರಾಗಿರುವ ನಗರವಾಸಿಗಳಿಗೆ ತಕ್ಷಣದ ವಿಶ್ರಾಂತಿ ನೀಡಲು ಜಾಂಗ್ ಈ ಐಡಿಯಾ ಹುಡುಕಿದರು.
70% ಪುರುಷರು ಹಾಗೂ 30% ಮಹಿಳೆಯರು ಈ ಕೇಂದ್ರದ ನಿಯಮಿತ ಗ್ರಾಹಕರಾಗಿದ್ದಾರೆ. ತೀವ್ರ ಮಾನಸಿಕ ಒತ್ತಡ ಕಡಿಮೆ ಮಾಡಲು ಹಾಗೂ ಉತ್ತಮ ನಿದ್ರೆ ಪಡೆಯಲು ಈ ಬೆನ್ನು ತುರಿಸುವ ಸೆಷನ್ ಅತ್ಯಂತ ಸಹಕಾರಿ ಎಂದು ಗ್ರಾಹಕರು ತಿಳಿಸಿದ್ದಾರೆ. ಚೀನಾದಾದ್ಯಂತ 100ಕ್ಕೂ ಹೆಚ್ಚು ‘ಸುಮಾ’ ಶಾಖೆಗಳನ್ನು ತೆರೆಯುವ ಗುರಿ ಹೊಂದಿರುವ ಜಾಂಗ್ ಶಿಯಾವೊಖಿಯಾವೊ, ‘ಬೆನ್ನು ತುರಿಸುವುದನ್ನು’ ಒಂದು ಗೌರವಾನ್ವಿತ ವೃತ್ತಿಯನ್ನಾಗಿ ಮಾಡುವ ಕನಸು ಕಾಣುತ್ತಿದ್ದಾರೆ.

