ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪೆರ್ಡೂರು ಮೂಲದ ಪ್ರದೀಪ್ ಎಂಬ ಯುವಕನ ಸಾವಿಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಸಹೋದರ ಪೆರ್ಡೂರಿನ ದಿಲೀಪ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ, ಸನತ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳೆಂದು ದೂರಿನಲ್ಲಿ ಹೆಸರಿಸಲಾಗಿದೆ. ಹೊರರಾಜ್ಯದ ಇಬ್ಬರು ಕಾರ್ಮಿಕರು ಹಾಗೂ ಇತರರ ಹೆಸರೂ ದೂರಿನಲ್ಲಿ ಉಲ್ಲೇಖವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎಂಟು ವರ್ಷಗಳಿಂದ ಪ್ರೀತಿಯಲ್ಲಿದ್ದ ಯುವಕ
ದಿಲೀಪ್ ಕುಮಾರ್ ನೀಡಿರುವ ದೂರಿನ ಪ್ರಕಾರ, ಅವರ ಸಹೋದರ ಪ್ರದೀಪ್ ಕಳೆದ ಎಂಟು ವರ್ಷಗಳಿಂದ ಶ್ರಾವ್ಯ ಶೆಟ್ಟಿ ಎಂಬ ಯುವತಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದರು.
ಅಕ್ಟೋಬರ್ 27ರಂದು ರಾತ್ರಿ ಸುಮಾರು 10 ಗಂಟೆಗೆ ಪ್ರದೀಪ್ ನಾಯರ್ಕೋಡು ಪ್ರದೇಶದಲ್ಲಿ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಶ್ರಾವ್ಯ ಅವರ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ, ಸನತ್, ಕೃಷ್ಣ, ಸುಜಯ ಹಾಗೂ ಇತರರು ಮೂರು ಕಾರುಗಳಲ್ಲಿ ಬಂದು ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ಪ್ರದೀಪ್ ಅವರನ್ನು ಶ್ರಾವ್ಯ ಅವರ ಮನೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಸನ್ನ ಶೆಟ್ಟಿ ಕೋಲಿನಿಂದ ಪ್ರದೀಪ್ ಅವರ ಕಾಲು ಮತ್ತು ಬೆನ್ನಿಗೆ ಹಲ್ಲೆ ನಡೆಸಿದ್ದಾರೆ. ಇತರ ಆರೋಪಿಗಳು ಮರದ ತುಂಡುಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಉಡುಪಿಯಲ್ಲಿ ಆಸ್ಪತ್ರೆಯ ಶೌಚಾಲಯದಲ್ಲಿ ಯುವಕ ಆತ್ಮಹತ್ಯೆ: ಹಲ್ಲೆ ಆರೋಪದ ಬೆನ್ನಲ್ಲೇ ದುರಂತ
ಹಲ್ಲೆ ವಿಚಾರ ತಿಳಿದು ಸ್ನೇಹಿತರು ಸ್ಥಳಕ್ಕೆ
ಪ್ರದೀಪ್ ಮೇಲೆ ಹಲ್ಲೆ ನಡೆಯುತ್ತಿರುವ ವಿಷಯ ತಿಳಿದ ದಿಲೀಪ್ ಕುಮಾರ್ ತಮ್ಮ ಸ್ನೇಹಿತರನ್ನು ಶ್ರಾವ್ಯ ಅವರ ಮನೆಗೆ ಕಳುಹಿಸಿದ್ದರು. ಸ್ನೇಹಿತರು ಸ್ಥಳಕ್ಕೆ ತೆರಳಿದ ಬಳಿಕ ಹಲ್ಲೆ ನಿಂತಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 28ರಂದು ಪ್ರದೀಪ್ ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ಶ್ರಾವ್ಯ ಮತ್ತು ಅವರ ಸಹೋದರರು ಜೀವ ಬೆದರಿಕೆ ಹಾಕಿದ ಬಗ್ಗೆ ಪ್ರದೀಪ್ ತಮ್ಮ ಸಹೋದರ ದಿಲೀಪ್ ಅವರಿಗೆ ವಿವರಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ
ಹಲ್ಲೆ ಮತ್ತು ಜೀವ ಬೆದರಿಕೆಯಿಂದ ಮಾನಸಿಕವಾಗಿ ನೊಂದಿದ್ದ ಪ್ರದೀಪ್, ಅಕ್ಟೋಬರ್ 30ರಂದು ಸಂಜೆ ಸುಮಾರು 5.30ರ ವೇಳೆಗೆ ಆಸ್ಪತ್ರೆಯ ಶೌಚಾಲಯದಲ್ಲಿ ಕುತ್ತಿಗೆಗೆ ಬಿಳಿ ಟ್ಯಾಗ್ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

