ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಕಣಿವೆ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್ ಒಂದಿ ಪತನಗೊಂಡು ಭೀಕರ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಹೆಲಿಕಾಪ್ಟರ್ ಪೈಲಟ್ ಹಾಗೂ ಬೆಂಗಳೂರು ಮೂಲದ ಐವರು ಯಾತ್ರಾರ್ಥಿಗಳು ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಸಿಇಒ ಪ್ರತೀಕ್ ಜೈನ್ ಅವರು ಘಟನೆಯ ಸುಳಿವು ನೀಡಿದ್ದು, ಪ್ರಸ್ತುತ ಸ್ಥಳೀಯ ಆಡಳಿತ ಹಾಗೂ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿವೆ.
ಟ್ರ್ಯಾಕಿಂಗ್ ವ್ಯವಸ್ಥೆಯಿಂದ ದಿಢೀರ್ ಸಂಪರ್ಕ ಕಡಿತ:
ಘಟನೆಯ ವಿವರ ನೀಡಿದ ಯುಸಿಎಡಿಎ (UCADA) ಸಿಇಒ ಪ್ರತೀಕ್ ಜೈನ್, “ಶುಕ್ರವಾರ ಮಧ್ಯಾಹ್ನ 1.14ಕ್ಕೆ ಬದರಿನಾಥದಿಂದ ಸಹಸ್ತ್ರಧಾರಾ ಹೆಲಿಪೋರ್ಟ್ಗೆ ಹೆಲಿಕಾಪ್ಟರ್ ಹೊರಟಿತ್ತು. ಆದರೆ ಅದು ಜೋಶಿಮಠ ಕಣಿವೆಯನ್ನು ದಾಟುತ್ತಿದ್ದಾಗ, ಅದರ ಚಲನವಲನಗಳನ್ನು ಗಮನಿಸಲು ನಾವು ಬಳಸುವ ಟ್ರ್ಯಾಕಿಂಗ್ ಸಿಸ್ಟಮ್ನಿಂದ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿದೆ,” ಎಂದು ತಿಳಿಸಿದ್ದಾರೆ.ಪೈಲಟ್ ಸೇರಿದಂತೆ ಒಟ್ಟು ಆರು ಜನರು ಹೆಲಿಕಾಪ್ಟರ್ನಲ್ಲಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್ನಲ್ಲಿದ್ದ ಐದೂ ಜನ ಪ್ರಯಾಣಿಕರು ಬೆಂಗಳೂರು ಮೂಲದವರು ಎಂಬುದು ದೃಢಪಟ್ಟಿದೆ.
ಸ್ಥಳಕ್ಕೆ ಧಾವಿಸಿದ SDRF ಹಾಗೂ ಸೇನಾ ಪಡೆಗಳು:
ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ ಚಮೋಲಿ ಜಿಲ್ಲಾಡಳಿತದ ಸಮನ್ವಯದೊಂದಿಗೆ ಶೋಧ ಮತ್ತು ರಕ್ಷಣಾ ತಂಡಗಳನ್ನು ತಕ್ಷಣವೇ ಕಾರ್ಯಾಚರಣೆಗೆ ಇಳಿಸಲಾಗಿದೆ. ಘಟನಾ ಸ್ಥಳದ ಸುತ್ತಮುತ್ತ ಶೋಧ ನಡೆಸಲು ಭಾರತೀಯ ಸೇನಾ ತುಕಡಿಯ ಜೊತೆಗೆ ರಾಜ್ಯ ವಿಪತ್ತು ಶಮನ ಪಡೆ (SDRF) ತಂಡವನ್ನು ನಿಯೋಜಿಸಲಾಗಿದೆ. ದುರಂತ ಸಂಭವಿಸಿದ ನಿಖರ ಸ್ಥಳ ಹಾಗೂ ದುರ್ಗಮ ಕಣಿವೆ ಪ್ರದೇಶವನ್ನು ಪತ್ತೆಹಚ್ಚಲು ರಕ್ಷಣಾ ಹೆಲಿಕಾಪ್ಟರ್ ಅನ್ನು ಕಳುಹಿಸಲಾಗಿದೆ. ಹವಾಮಾನ ವೈಪರೀತ್ಯ ತಿಳಿಯಾದ ತಕ್ಷಣ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಸಂತ್ರಸ್ತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

