ಮಂಗಳೂರು: ಮಂಗಳೂರಿನ ಜೆಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿಟ್ಟು ಕಾವೇರಿದ್ದ ಭೀಕರ ಹಿಟ್ ಆಂಡ್ ರನ್ (Hit and Run) ಪ್ರಕರಣವನ್ನು ಮಂಗಳೂರು ನಗರ ಸಂಚಾರ ದಕ್ಷಿಣ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಅಪಘಾತ ಎಸಗಿ ಸ್ಥಳದಿಂದ ಪರಾರಿಯಾಗಿದ್ದ ಮಂಗಳೂರಿನ ‘ಶ್ರೀ ಕಟೀಲ್’ ಖಾಸಗಿ ಬಸ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಕಾಸರಗೋಡು ಮೂಲದ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ. ಅಕ್ಟೋಬರ್ 22ರಂದು ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುರುತು ಪತ್ತೆಯಾಗದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಅಕ್ಟೋಬರ್ 22ರಂದು ರಾತ್ರಿ ಸುಮಾರು 7:50ರ ವೇಳೆಗೆ, ಜೆಪ್ಪಿನಮೊಗರುವಿನ ಎ.ಕೆ. ಲಾಡ್ಜ್ ಎದುರು ರಾಷ್ಟ್ರೀಯ ಹೆದ್ದಾರಿ 66ರ ಎಡಭಾಗದ ಕಚಾ ರಸ್ತೆಯಲ್ಲಿ ಸುಮಾರು 30 ರಿಂದ 35 ವರ್ಷ ವಯಸ್ಸಿನ ಪಾದಚಾರಿಯೊಬ್ಬರು ಮಹಾಕಾಳಿ ಪಡ್ಪುವಿನತ್ತ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಬಸ್ (ನಂದನ ನೋಂದಣಿ ಸಂಖ್ಯೆ KA-19-AA-8499) ಪಾದಚಾರಿಗೆ ಜೋರಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಹಾದಿಹೋಕ ರಸ್ತೆಗೆ ಬಿದ್ದು ತಲೆಗೆ ತೀವ್ರ ರಕ್ತಸ್ರಾವದ ಗಾಯಗಳಾಗಿದ್ದವು. ಡಿಕ್ಕಿ ಹೊಡೆದ ಬಸ್ ಚಾಲಕ ವಾಹನವನ್ನು ನಿಲ್ಲಿಸದೇ ಘಟನಾ ಸ್ಥಳದಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ (Wenlock) ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಪರೀಕ್ಷಿಸಿದ ವೈದ್ಯರು ವ್ಯಕ್ತಿ ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 281, 106(1) ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ಸಂಖ್ಯೆ 285/2026 ಅನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅಪಘಾತ ನಡೆದ ಸ್ಥಳ ಹಾಗೂ ಹೆದ್ದಾರಿಯ ವಿವಿಧ ಸಿಸಿಟಿವಿ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದ ಪೊಲೀಸರು, ಅಪಘಾತ ಎಸಗಿದ ವಾಹನವನ್ನು ರೂಟ್ ನಂಬರ್ 42ರಲ್ಲಿ ಸಂಚರಿಸುವ ‘ಶ್ರೀ ಕಟೀಲ್’ ಹೆಸರಿನ ಖಾಸಗಿ ಬಸ್ ಎಂದು ಗುರುತಿಸಿ ಜಪ್ತಿ ಮಾಡಿದ್ದಾರೆ. ಬಸ್ ಚಾಲಕನನ್ನು ಕಾಸರಗೋಡು ನಿವಾಸಿಯಾಗಿರುವ ಸುಧೀರ್ ಕೆ. (40) ಎಂದು ಗುರುತಿಸಲಾಗಿದೆ. ಈತನ ಚಾಲನಾ ಪರವಾನಗಿ (DL) ಚಾಲ್ತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸ್ಕೂಟರ್ಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣವಾದ ಘಟನೆಗೆ ಟ್ವಿಸ್ಟ್
ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಬಸ್ನಲ್ಲಿದ್ದ ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಚಾಲಕ ಹಾಗೂ ಸಾಕ್ಷಿಗಳ ಮೊಬೈಲ್ ಲೋಕೇಶನ್ ವಿವರಗಳು ಮತ್ತು ಇತರ ಲಭ್ಯ ಸಾಕ್ಷ್ಯಗಳನ್ನು ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

