ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಸರಣಿ ಹಗರಣಗಳಲ್ಲಿ ಮುಳುಗಿದ್ದು, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಡವರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಜನತಾ ಪಾರ್ಟಿ (BJP) ಮಂಗಳೂರು ನಗರ ಉತ್ತರ ಮಂಡಲದ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ – ನಮ್ಮ ಹಕ್ಕು ನಮಗೆ ನೀಡಿ” ಜನಾಂದೋಲನದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಪಾಲ್ಗೊಂಡು ಅವರು ಜಂಟಿಯಾಗಿ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಂಗಳೂರು ನಗರ ಉತ್ತರ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ, ಕಾಂಗ್ರೆಸ್ ಆಡಳಿತದಲ್ಲಿ ಗ್ರಾಮೀಣ ಪ್ರಗತಿ ಸಂಪೂರ್ಣ ಸ್ತಬ್ಧವಾಗಿದೆ ಎಂದು ಆರೋಪಿಸಿದರು:
ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀರುಮಾರ್ಗ ಪಂಚಾಯತ್ ಒಂದರಲ್ಲೇ 8 ರಿಂದ 10 ಕೋಟಿ ರೂಪಾಯಿ ವೆಚ್ಚದಲ್ಲಿ ಶೇಕಡಾ 80 ರಷ್ಟು ಮೂಲಸೌಕರ್ಯ ಕಾಮಗಾರಿ ನಡೆಸಲಾಗಿತ್ತು. ಆದರೆ ಇಂದು ಸಣ್ಣ ತೋಡು, ರಸ್ತೆ ಅಥವಾ ಸೇತುವೆ ನಿರ್ಮಾಣಕ್ಕೂ ಸರ್ಕಾರದಲ್ಲಿ ನಯಾಪೈಸೆ ಹಣವಿಲ್ಲ. ಮೂರು ವರ್ಷಗಳಲ್ಲಿ ಒಂದೇ ಒಂದು ಆಶ್ರಯ ಮನೆ ಮಂಜೂರಾಗಿಲ್ಲ. ಹಿರಿಯ ಜೀವಗಳ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ಪಿಂಚಣಿಗೂ ಕತ್ತರಿ ಹಾಕಿ ತಿಂಗಳುಗಟ್ಟಲೆ ಸತಾಯಿಸಲಾಗುತ್ತಿದೆ.
ಜನನ-ಮರಣ ಪ್ರಮಾಣಪತ್ರ ಹಾಗೂ ನೋಂದಣಿ ಶುಲ್ಕಗಳ ಮೇಲೆ ದುಪ್ಪಟ್ಟು ತೆರಿಗೆ ಹಾಕಿ ಲೂಟಿ ಮಾಡಲಾಗುತ್ತಿದೆ. ಕೆಎಸ್ಆರ್ಟಿಸಿ ಬಸ್ ಸೌಲಭ್ಯವೂ ಇಲ್ಲದೆ ಶಾಲಾ ಮಕ್ಕಳು ಪರದಾಡುತ್ತಿದ್ದಾರೆ. ಸಿಎಂ ಮಂಗಳೂರಿಗೆ ಬಂದು ₹30,000 ಕೋಟಿ ಘೋಷಣೆ ಮಾಡುತ್ತಾರೆ, ಆದರೆ ವಾಸ್ತವದಲ್ಲಿ ಅನುದಾನವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪಂಚಾಯಿತಿಗಳಲ್ಲಿ ವರ್ಗಾವಣೆ ದಂಧೆ ಮುಗಿಲು ಮುಟ್ಟಿದೆ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಪಂಚಾಯತ್ ವ್ಯವಸ್ಥೆಯನ್ನು ಸರ್ಕಾರ ಸಂಪೂರ್ಣ ನಾಶಪಡಿಸಿದೆ ಎಂದು ಕಿಡಿಕಾರಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 96ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಕಣ್ಣೀರಿಡುತ್ತಿದ್ದಾರೆ. ಪಂಚಾಯಿತಿಗೆ ಬರುವ ₹10 ಲಕ್ಷ ಅನುದಾನದಲ್ಲಿ ₹6 ಲಕ್ಷ ಕುಡಿಯುವ ನೀರಿನ ಕರೆಂಟ್ ಬಿಲ್ಗೆ ಹಾಗೂ ₹4 ಲಕ್ಷ ಸಿಬ್ಬಂದಿ ವೇತನಕ್ಕೇ ಸರಿಯಾಗುತ್ತಿದೆ.
ಇದನ್ನೂ ಓದಿ: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ: ಕಾಂಗ್ರೆಸ್ನ ಶರಣಪ್ಪ ಮಟ್ಟೂರ್ ಮಣಿಸಿ ಶಶೀಲ್ ನಮೋಶಿಗೆ ಭರ್ಜರಿ ಗೆಲುವು
ಹಳ್ಳಿಗಳಲ್ಲಿ ಕುಡಿಯುವ ನೀರು ಅಥವಾ ನೈರ್ಮಲ್ಯ ಕಾಮಗಾರಿ ನಡೆಯುತ್ತಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 15-16ನೇ ಹಣಕಾಸು ಆಯೋಗ, ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಅನುದಾನದಿಂದ ಮಾತ್ರ. ರಾಜ್ಯದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. 2024ರಲ್ಲಿ ಅಧಿಸೂಚಿಸಿದ ಪಿಡಿಒ (PDO) ಪರೀಕ್ಷೆಯನ್ನೂ ನಡೆಸಿಲ್ಲ. ಯುವನಿಧಿ ಯೋಜನೆಯೂ ಶೂನ್ಯವಾಗಿದೆ. ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ, ಮೂಡಾ ಹಗರಣ, ಅಬಕಾರಿ ಇಲಾಖೆ ಲೂಟಿ ಸೇರಿದಂತೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ವಿರುದ್ಧ ಗ್ರಾಮ ಮಟ್ಟದಿಂದಲೇ ಸತತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

