ಮಂಗಳೂರು: ಧಾರ್ಮಿಕ ಪ್ರವಚನ ನೀಡುತ್ತಾ ಸನ್ಮಾರ್ಗದ ಪಾಠ ಹೇಳಿಕೊಡಬೇಕಾದ ಧರ್ಮಗುರುವೊಬ್ಬ, ತನ್ನಲ್ಲೇ ಶಿಕ್ಷಣ ಪಡೆಯುತ್ತಿದ್ದ ಯುವತಿಯನ್ನು ಪ್ರೀತಿಸಿ, ಮೊದಲ ಮದುವೆಯ ವಿಚಾರ ಮುಚ್ಚಿಟ್ಟು ಎರಡನೇ ಮದುವೆಯಾಗಿರುವ ವಿವಾದಾತ್ಮಕ ಘಟನೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬೆಟಗುಳಿಯ ದಾವುದ್ ಖಾಸಿಂ ಎಂಬುವರ 22 ವರ್ಷದ ಪುತ್ರಿ ಮಗದುಮ್ಮ ಹಾಗೂ ಮಂಗಳೂರಿನ ಅಸೈಗೋಳಿ ನಿವಾಸಿ, 40 ವರ್ಷದ ಧರ್ಮಗುರು ಅಶ್ರಫ್ ‘ಸ’ ಅದಿ ನಡುವೆ ಈ ಪ್ರೇಮ ಪ್ರಸಂಗ ನಡೆದಿದ್ದು, ಪ್ರಕರಣವು ಕೊಣಾಜೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮದ್ರಸಾ ಪಾಠದ ಹೆಸರಲ್ಲಿ ಪ್ರೇಮ ಪಯಣ – ಪೋಷಕರ ಕಣ್ಣೀರು:
ಅಶ್ರಫ್ ‘ಸ’ ಅದಿ ಹಿಂದೆ ಕುಮಟಾದ ಮದ್ರಸಾದಲ್ಲಿ ಧರ್ಮಗುರುವಾಗಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಗೆ ಧಾರ್ಮಿಕ ಶಿಕ್ಷಣಕ್ಕೆ ಬರುತ್ತಿದ್ದ ಮಗದುಮ್ಮ ಜೊತೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬಳಿಕ ಕುಮಟಾ ತೊರೆದು ಮುಂಬೈಗೆ ತೆರಳಿದ್ದ ಈತ, ಇತ್ತೀಚೆಗೆ ಅಕ್ಟೋಬರ್ 22 ರಂದು ಕುಮಟಾಗೆ ವಾಪಸಾಗಿ ಯುವತಿಯನ್ನು ಮಂಗಳೂರಿಗೆ ಕರೆತಂದಿದ್ದಾನೆ. ಅಲ್ಲದೆ, ಆಕೆಯೊಂದಿಗೆ ನಿಖಾ (ಮದುವೆ) ಮಾಡಿಕೊಂಡು ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಿಕೊಂಡಿದ್ದಾನೆ. ಮಗಳು ಹಠಾತ್ ಕಾಣೆಯಾದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿ, ಕೊಣಾಜೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಠಾಣೆಯಲ್ಲೇ ಪೋಷಕರನ್ನು ನಿರಾಕರಿಸಿದ ಯುವತಿ:
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೊಣಾಜೆ ಪೊಲೀಸರು ಧರ್ಮಗುರು ಹಾಗೂ ಯುವತಿ ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೋಷಕರು ತಮ್ಮ ಮಗಳ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ, ಆಕೆ ಪೋಷಕರ ಜೊತೆ ವಾಪಸ್ ಹೋಗಲು ಸಂಪೂರ್ಣವಾಗಿ ನಿರಾಕರಿಸಿದ್ದಾಳೆ. ತಾನು ವಯಸ್ಕಳಾಗಿದ್ದು, ಧರ್ಮಗುರುವಿನ ಜೊತೆಯೇ ಜೀವಿಸುವುದಾಗಿ ಪೊಲೀಸರ ಮುಂದೆ ಖಡಕ್ ಆಗಿ ಹೇಳಿಕೆ ನೀಡಿದ್ದಾಳೆ. ಕಣ್ಣೆದುರೇ ಮಗಳು ಧರ್ಮಗುರುವಿನ ಜೊತೆ ತೆರಳುವುದನ್ನು ಕಂಡ ಪೋಷಕರು ಠಾಣೆಯ ಆವರಣದಲ್ಲೇ ಅಸಹಾಯಕರಾಗಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸ್ಕೂಟರ್ಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣವಾದ ಘಟನೆಗೆ ಟ್ವಿಸ್ಟ್
ಮೌಲ್ವಿ ನಡೆಗೆ ಮುಸ್ಲಿಂ ಸಮುದಾಯದ ತೀವ್ರ ಆಕ್ರೋಶ – ಬಹಿಷ್ಕಾರದ ನಿರ್ಧಾರ:
ಆರೋಪಿ ಅಶ್ರಫ್ ‘ಸ’ ಅದಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ, ಈ ವಿಚಾರವನ್ನು ಮುಚ್ಚಿಟ್ಟು ಯುವತಿಯ ‘ಮೈಂಡ್ ವಾಶ್’ ಮಾಡಿ ಮದುವೆಯಾಗಿದ್ದಾನೆ ಎಂಬುದು ಪೋಷಕರ ಗಂಭೀರ ಆರೋಪವಾಗಿದೆ. ಈ ಘಟನೆ ಸ್ವತಃ ಮುಸ್ಲಿಂ ಸಮುದಾಯದಲ್ಲೇ ತೀವ್ರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಧರ್ಮದ ಹಾದಿ ತೋರಿಸಬೇಕಾದ ಮೌಲ್ವಿಯೇ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ಕಿಡಿಕಾರಿರುವ ಸಮುದಾಯದ ಮುಖಂಡರು, ಈ ಧರ್ಮಗುರುವಿನ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇನ್ನು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಶ್ರಫ್, ಯುವತಿಯೊಂದಿಗೆ ತೆರಳಿದ್ದಾನೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

