ಮಂಗಳೂರು: ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆದಿರುವ ಬೆನ್ನಲ್ಲೇ ಪ್ರಕರಣಕ್ಕೊಂದು ಹೊಸ ಹಾಗೂ ಅಚ್ಚರಿಯ ಟ್ವಿಸ್ಟ್ ಸಿಕ್ಕಿದೆ. ಮೃತ ಸೌಜನ್ಯ ಹಾಗೂ ಆಕೆಯ ತಾಯಿ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಮಂಗಳೂರಿನ ಎಸ್ಐಟಿ (SIT) ಕಚೇರಿಗೆ ದೂರು ಸಲ್ಲಿಕೆಯಾಗಿದೆ ಧರ್ಮಸ್ಥಳ ಗ್ರಾಮದ ಕಿಶೋರ್ ಎಂಬುವವರು ಈ ದೂರು ನೀಡಿದ್ದು, ಕುಸುಮಾವತಿಯವರು ನಿಜವಾಗಿಯೂ ಸೌಜನ್ಯ ಅವರ ಹೆತ್ತ ತಾಯಿಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಆಶ್ಚರ್ಯಕರ ಆಗ್ರಹ ಮಾಡಿದ್ದಾರೆ.
ಕಿಶೋರ್ ನೀಡಿದ ದೂರಿನಲ್ಲೇನಿದೆ?
ದೂರುದಾರ ಕಿಶೋರ್ ಅವರ ಆರೋಪಗಳ ಪ್ರಕಾರ, ಪ್ರಕರಣದ ಹಿಂದೆ ಜಮೀನಿನ ವಿವಾದ ಮತ್ತು ಗುರುತಿನ ವಂಚನೆಯ ಅನುಮಾನಗಳಿವೆ. 2015ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದ ಇಂದಿರಾವತಿ (ಕೋಂ ಚಂದಪ್ಪ ಗೌಡ) ಅವರಿಗೆ ಜಾಗ ಮಂಜೂರಾಗಿತ್ತು. ಆದರೆ, ಸದ್ಯ ಈ ಜಾಗ ಕುಸುಮಾವತಿ ಅವರ ಸ್ವಾಧೀನದಲ್ಲಿದೆ. ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸ್ತವ್ಯವೇ ಇಲ್ಲ ಎಂದು ಕಿಶೋರ್ ಆರೋಪಿಸಿದ್ದಾರೆ.
ಇಂದಿರಾವತಿ ಮತ್ತು ತಾನು ಒಬ್ಬರೇ ಎಂದು ಕುಸುಮಾವತಿ ಸಲ್ಲಿಸಿರುವ ಪ್ರಮಾಣ ಪತ್ರ ಸುಳ್ಳಾಗಿದೆ. ಆಧಾರ್, ಪಡಿತರ ಚೀಟಿ ಸೇರಿದಂತೆ ಪ್ರಮುಖ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಕಿಶೋರ್ ತಹಶೀಲ್ದಾರ್ ಹಾಗೂ ಎಸ್ಐಟಿಗೆ ಕಂಪ್ಲೇಂಟ್ ನೀಡಿದ್ದಾರೆ. ಸೌಜನ್ಯ ಮತ್ತು ಆಕೆಯ ಸಹೋದರಿ ಸೌಮ್ಯ ನಿಜವಾಗಿ ಯಾರ ಮಕ್ಕಳು? ಜನನ ನೋಂದಣಿ, ಶಾಲಾ ದಾಖಲೆಗಳು ಹಾಗೂ ಅಗತ್ಯವಿದ್ದರೆ ಡಿಎನ್ಎ (DNA) ಸೇರಿದಂತೆ ವೈಜ್ಞಾನಿಕ ಪರೀಕ್ಷೆ ನಡೆಸಿ ತನಿಖೆ ಮಾಡಬೇಕು. ಜಮೀನಿನ ವಿಚಾರಕ್ಕೆ ಈ ಕೊಲೆ ನಡೆದಿದೆಯೇ ಹಾಗೂ ಸೌಜನ್ಯ ಮಾವ ವಿಟ್ಠಲ ಗೌಡ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕಿಶೋರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಚುರುಕು: ಎಸ್ಐಟಿ ವಿಚಾರಣೆಗೆ ಹಾಜರಾದ ಅಂದಿನ ಡಿವೈಎಸ್ಪಿ, ಸಿಪಿಐ & ಪಿಎಸ್ಐ
ದೂರು ವಜಾಗೊಳಿಸಿದ ಎಸ್ಐಟಿ – ‘ತಾಯಿ ಯಾರೆಂಬುದಕ್ಕೆ ನಮಗೆ ಯಾವುದೇ ಅನುಮಾನವಿಲ್ಲ’:
ಈ ಕುರಿತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಸ್ಐಟಿ ತಂಡದ ಹಿರಿಯ ಸದಸ್ಯ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ಮೃತ ಸೌಜನ್ಯ ಕುಸುಮಾವತಿ ಅವರ ಮಗಳೇ ಎಂಬ ಬಗ್ಗೆ ನಮಗೆ ಯಾವುದೇ ರೀತಿಯ ಸಂದೇಹ ಅಥವಾ ಅನುಮಾನಗಳಿಲ್ಲ. ಎಸ್ಐಟಿ ತಂಡವು ತನ್ನ ತನಿಖಾ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಸೌಜನ್ಯ ಕೊಲೆ ಪ್ರಕರಣಕ್ಕೆ ನೇರ ಸಂಬಂಧವಿಲ್ಲದ ಸಿವಿಲ್ ಅಥವಾ ಸ್ಥಳೀಯ ವಿವಾದಗಳ ಬಗ್ಗೆ ನಾವು ತನಿಖೆ ನಡೆಸುವುದಿಲ್ಲ. ಸ್ಥಳೀಯವಾಗಿ ಯಾವುದೇ ಆಸ್ತಿ ಅಥವಾ ಜಮೀನು ವಿವಾದಗಳಿದ್ದರೆ, ಅವುಗಳನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸರು ಅಥವಾ ಕಂದಾಯ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಎಂದು ಐಪಿಎಸ್ (SIT ಸದಸ್ಯ) ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಇದರೊಂದಿಗೆ ಎಸ್ಐಟಿಯು ಪ್ರಕರಣಕ್ಕೆ ಸಂಬಂಧಪಡದ ಅನಗತ್ಯ ದೂರುಗಳನ್ನು ಬದಿಗೊತ್ತಿ, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಸಲಿ ಅಪರಾಧಿಗಳ ಪತ್ತೆಯತ್ತ ತನಿಖೆಯನ್ನು ಕೇಂದ್ರೀಕರಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

