ಜೆನೀವಾ : ಡಚ್ ಮೂಲದ ಐಷಾರಾಮಿ ಕ್ರೂಸ್ ಹಡಗು ಎಂವಿ ಹೊಂಡಿಯಸ್ ನಲ್ಲಿ ಕಾಣಿಸಿಕೊಂಡ ಹಾಂಟಾವೈರಸ್ ಸೋಂಕು ಇದೀಗ ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವಿವಿಧ ದೇಶಗಳ ಆರೋಗ್ಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ಜರ್ಮನಿ, ಬ್ರಿಟನ್, ಅಮೆರಿಕಾ ಸೇರಿದಂತೆ ಕನಿಷ್ಠ 12 ರಾಷ್ಟ್ರಗಳು ನೇರ ಅಥವಾ ಪರೋಕ್ಷವಾಗಿ ಈ ಸೋಂಕಿನಿಂದ ಪ್ರಭಾವಿತವಾಗಿವೆ ಎಂದು ವರದಿಯಾಗಿದೆ.
ದಕ್ಷಿಣ ಅಟ್ಲಾಂಟಿಕ್ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಂವಿ ಹೊಂಡಿಯಸ್ ಹಡಗಿನಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿಯಲ್ಲಿ ಹಂಟಾ ವೈರಸ್ ಲಕ್ಷಣಗಳು ಕಾಣಿಸಿಕೊಂಡ ನಂತರ ಪರಿಸ್ಥಿತಿ ಗಂಭೀರಗೊಂಡಿತು. ವರದಿ ಪ್ರಕಾರ ಇದುವರೆಗೆ ಹಲವಾರು ದೃಢೀಕೃತ ಹಾಗೂ ಅನುಮಾನಾಸ್ಪದ ಪ್ರಕರಣಗಳು ಪತ್ತೆಯಾಗಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ.
ಇದನ್ನೂ ಓದಿರಾಜ್ಯದಾನಿಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ: ನವವಿವಾಹಿತೆಯ ಶವ ಪತ್ತೆ
ಸಾಮಾನ್ಯವಾಗಿ ಇಲಿ ಮತ್ತು ಇತರ ಕೀಟಗಳ ಮಲಮೂತ್ರ ಅಥವಾ ಲಾಲೆಯ ಮೂಲಕ ಹರಡುವ ಹಂಟಾವೈರಸ್, ಈ ಬಾರಿ ಮಾನವರ ನಡುವೆ ಹರಡುವ ಸಾಧ್ಯತೆಯೂ ಇರುವ ಆಂಡಿಸ್ ವೈರಸ್ ರೂಪವಾಗಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಆದರೆ ಇದು ಸುಲಭವಾಗಿ ಹರಡುವ ವೈರಸ್ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ದೀರ್ಘಕಾಲದ ಸಮೀಪ ಸಂಪರ್ಕ ಇದ್ದರೆ ಮಾತ್ರ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ
ಹಡಗಿನಲ್ಲಿ ಸೋಂಕು ಪತ್ತೆಯಾದ ನಂತರ ಪ್ರಯಾಣಿಕರನ್ನು ವಿವಿಧ ದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಹಲವರನ್ನು ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಅಮೆರಿಕಾ, ಬ್ರಿಟನ್, ನೆದರ್ಲ್ಯಾಂಡ್ಸ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ನಾಗರಿಕರ ಆರೋಗ್ಯ ಮೇಲ್ವಿಚಾರಣೆಗೆ ಕ್ರಮ ಕೈಗೊಂಡಿವೆ.
ಭಾರತದ ಇಬ್ಬರು ಸಿಬ್ಬಂದಿಯೂ ಈ ಹಡಗಿನಲ್ಲಿ ಇದ್ದರು. ಆದರೆ ಅವರು ಆರೋಗ್ಯವಾಗಿದ್ದು ಯಾವುದೇ ಲಕ್ಷಣಗಳಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅವರನ್ನು ನೆದರ್ಲ್ಯಾಂಡ್ಸ್ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈಗಾಗಲೇ 12ಕ್ಕೂ ಹೆಚ್ಚು ರಾಷ್ಟ್ರಗಳು ಸಂಪರ್ಕ ಶೋಧನೆ, ಕ್ವಾರಂಟೈನ್ ಮತ್ತು ವೈದ್ಯಕೀಯ ಪರೀಕ್ಷೆ ಕಾರ್ಯಾಚರಣೆಗಳನ್ನು ಆರಂಭಿಸಿವೆ. ಸಾರ್ವಜನಿಕರಲ್ಲಿ ಆತಂಕ ಬೇಡ, ಆದರೆ ಎಚ್ಚರಿಕೆ ಅಗತ್ಯ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ
ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ


