ಬೆಂಗಳೂರು: ಕರ್ನಾಟಕವು ಹಲವು ದಶಕಗಳಿಂದ ಯೋಗದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿನ ಅನೇಕ ಮಹನೀಯರು ಯೋಗ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಪ್ರಶಾಂತಿ ಕುಟೀರಂ’ ಯೋಗ ಕೇಂದ್ರದ 50ನೇ ವರ್ಷದ ಸುವರ್ಣ ಸಂಭ್ರಮಾಚರಣೆ ಹಾಗೂ ಹಿರಿಯ ಆರ್ಎಸ್ಎಸ್ ಸಂಘಟಕರಾಗಿದ್ದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಯೋಗದ ಮಹತ್ವವನ್ನು ವಿವರಿಸುತ್ತಾ ಕನ್ನಡದ ಮೇರು ನಟ ವರನಟ ಡಾ. ರಾಜ್ಕುಮಾರ್ ಅವರನ್ನು ವಿಶೇಷವಾಗಿ ಸ್ಮರಿಸಿದರು.
ವರನಟ ಡಾ. ರಾಜ್ಕುಮಾರ್ ಯೋಗ ಸಾಧನೆ & ಪ್ರಶಾಂತಿ ಕುಟೀರದ ಪಯಣ ಸ್ಮರಿಸಿದ ಮೋದಿ:
ಯೋಗದ ಮಹತ್ವ ಕುರಿತು ಮಾತನಾಡಿದ ಪ್ರಧಾನಿ, “ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರಂತಹ ಮಹನೀಯರು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಯೋಗ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ” ಎಂದು ಸ್ಮರಿಸಿದರು. ಪ್ರಶಾಂತಿ ಕುಟೀರಂನ 50 ವರ್ಷಗಳ ಪಯಣವು ಸೇವೆ ಮತ್ತು ಸಮರ್ಪಣೆಯ ಅದ್ಭುತ ಕಥೆಯಾಗಿದೆ. ಒಂದು ಸರಳ ಯೋಗ ಕೇಂದ್ರವು ಇಷ್ಟು ದೊಡ್ಡ ಜಾಗತಿಕ ಆಂದೋಲನವಾಗಿ ಬೆಳೆದಿರುವುದು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿದಾಯಕವಾಗಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್.ವಿ. ಶೇಷಾದ್ರಿ ಅವರ ಸರಳತೆ & ನಿಸ್ವಾರ್ಥ ಸೇವೆಯನ್ನು ನೆನೆದ ಪ್ರಧಾನಿ:
ಆರ್ಎಸ್ಎಸ್ನ ಹಿರಿಯ ಪ್ರಚಾರಕರಾಗಿದ್ದ ಹೆಚ್.ವಿ. ಶೇಷಾದ್ರಿ ಅವರೊಂದಿಗಿನ ಒಡನಾಟವನ್ನು ಪ್ರಧಾನಿ ಮೋದಿ ಭಾವುಕರಾಗಿ ಹಂಚಿಕೊಂಡರು. “ಶೇಷಾದ್ರಿ ಅವರನ್ನು ನೆನಪಿಸಿಕೊಂಡಾಗ ಮೊದಲು ನೆನಪಾಗುವುದು ಅವರ ಸರಳ ಸ್ವಭಾವ ಮತ್ತು ವಿನಯ. ತಾವು ಹಿಂದೆಯೇ ಉಳಿದು ಇತರರನ್ನು ಮುಂದೆ ತರುವುದು ಹಾಗೂ ಜನರನ್ನು ಒಗ್ಗೂಡಿಸಿ ದೇಶಕ್ಕಾಗಿ ಸಿದ್ಧಪಡಿಸುವುದೇ ಅವರ ಜೀವನದ ಧ್ಯೇಯವಾಗಿತ್ತು” ಎಂದರು.
“ಮಗುವಿನ ಆರೈಕೆಗಾಗಿ ತಾಯಿ ಇಡೀ ರಾತ್ರಿ ನಿದ್ರಿಸದೆ ನಿಸ್ವಾರ್ಥವಾಗಿ ದುಡಿಯುತ್ತಾಳೆ. ಅದೇ ಭಾವನೆಯನ್ನು ಸಮಾಜದ ಕಡೆಗೂ ವಿಸ್ತರಿಸಿದರೆ ಸಮಾಜಕ್ಕೆ ಅಪಾರ ಒಳಿತಾಗುತ್ತದೆ ಎಂದು ಶೇಷಾದ್ರಿ ಅವರು ಹೇಳುತ್ತಿದ್ದರು. ಅವರ ಮಾರ್ಗದರ್ಶನ ಪಡೆದ ಕ್ಷಣಗಳು ಇಂದಿಗೂ ನನ್ನ ಪಾಲಿಗೆ ಅಮೂಲ್ಯ ಆಸ್ತಿ” ಎಂದು ಮೋದಿ ಹೇಳಿದರು. “ನಾವು ಸಮಾಜಕ್ಕೆ ಎರಡೂ ಕೈಗಳಿಂದ ಕೊಟ್ಟರೆ, ಸಮಾಜ ಲಕ್ಷಾಂತರ ಕೈಗಳಿಂದ ನಮಗೆ ಮರಳಿ ನೀಡುತ್ತದೆ ಎಂದು ಶೇಷಾದ್ರಿ ಅವರು ಹೇಳುತ್ತಿದ್ದರು. ಜನರ ಸೇವೆ ಮಾಡುವಾಗಲೆಲ್ಲ ಅವರ ಆಶೀರ್ವಾದ ನನಗೆ ದೊರೆತಿದ್ದು, ಅದುವೇ ನನ್ನ ಜೀವನದ ದೊಡ್ಡ ಆಸ್ತಿ” ಎಂದು ಪ್ರಧಾನಿ ನುಡಿದರು.

“ಜಗತ್ತು ಭಾರತವನ್ನು ಅರಿಯಲು ಯೋಗವೇ ಹೆಬ್ಬಾಗಿಲು”: ವಿಶ್ವ ನಾಯಕರ ಯೋಗ ಕ್ರೇಜ್ ಬಣ್ಣಿಸಿದ ಮೋದಿ!
ಕಳೆದ 12 ವರ್ಷಗಳಲ್ಲಿ ಭಾರತ ತನ್ನ ಸಂಸ್ಕೃತಿ ಮತ್ತು ಜ್ಞಾನ ವಿಜ್ಞಾನವನ್ನು ಪೂರ್ಣ ವಿಶ್ವಾಸದಿಂದ ಜಗತ್ತಿನ ಮುಂದಿಟ್ಟಿದೆ. ಇದರ ಫಲವಾಗಿ ಇಂದು ಅಮೆರಿಕದಿಂದ ಆಸ್ಟ್ರೇಲಿಯಾವರೆಗೆ ವಿಶ್ವದ ಎಲ್ಲಾ ರಾಷ್ಟ್ರಗಳು ‘ವಿಶ್ವ ಯೋಗ ದಿನ’ ಆಚರಿಸುತ್ತಿವೆ ಎಂದು ಮೋದಿ ತಿಳಿಸಿದರು. “ವಿದೇಶಿಯರಿಗೆ ಭಾರತವನ್ನು ಅರಿತುಕೊಳ್ಳಲು ಯೋಗವು ಒಂದು ಬಾಗಿಲಾಗಿದೆ. ನಾನು ವಿಶ್ವದ ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ನಾಯಕರು ನನ್ನೊಂದಿಗೆ ಯೋಗದ ಬಗ್ಗೆ ಚರ್ಚಿಸುತ್ತಾರೆ. ಜಗತ್ತಿನ ದೊಡ್ಡ ರಾಷ್ಟ್ರಗಳ ಅಧ್ಯಕ್ಷರ ಕುಟುಂಬಗಳೂ ಯೋಗದಲ್ಲಿ ತೊಡಗಿವೆ. ಮುಂದಿನ 25 ವರ್ಷಗಳಲ್ಲಿ ಭಾರತವು ಖಂಡಿತವಾಗಿಯೂ ‘ವಿಕಸಿತ ಭಾರತ’ವಾಗಲಿದೆ” ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.


