ಶಿಮ್ಲಾ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಹಾಗೂ ಗಾಂಧಿ ಕುಟುಂಬದ ಸದಸ್ಯರ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ. ಶಿಮ್ಲಾ ನಿವಾಸಿ ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಶಿಮ್ಲಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ (ಸೆಕ್ಷನ್ 196, 353 ಮತ್ತು 356) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಂಗನಾ ಅವರ ಹೇಳಿಕೆಗಳು ಸಾರ್ವಜನಿಕ ಶಾಂತಿಗೆ ಭಂಗ ತರುವಂತಿವೆ ಹಾಗೂ ಸಮಾಜದಲ್ಲಿ ದ್ವೇಷ ಹರಡುವಂತಿವೆ ಎಂದು ದೂರುದಾರರು ಆರೋಪಿಸಿದ್ದಾರೆ.
ವಿವಾದಕ್ಕೆ ಕಾರಣವಾದ ಕಂಗನಾ ರಣಾವತ್ ಪೋಸ್ಟ್ನಲ್ಲಿ ಏನಿತ್ತು?
ನವೆಂಬರ್ 10ರಂದು ಕಂಗನಾ ರಣಾವತ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ (ಇನ್ಸ್ಟಾಗ್ರಾಮ್ ಮತ್ತು ಎಕ್ಸ್) ಹಂಚಿಕೊಂಡಿದ್ದ ಬರಹವೊಂದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವಿನ ಸುತ್ತ ಅನುಮಾನ ಹುಟ್ಟಿಸುವ ರೀತಿಯಲ್ಲಿ ಕಂಗನಾ ಉಲ್ಲೇಖಿಸಿದ್ದರು. “ಎಲ್ಲರೂ ಈಗ ಎನ್ವಿಡಿಯಾ ಹನಿಟ್ರ್ಯಾಪ್ ವಿವಾದದ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ‘ಎಮರ್ಜೆನ್ಸಿ’ ಸಿನಿಮಾಗಾಗಿ ಭಾರತೀಯ ರಾಜಕೀಯ ಮತ್ತು ಗಾಂಧಿ ಕುಟುಂಬದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಆದರೆ ನನಗೆ ಇಂದಿಗೂ ಅರ್ಥವಾಗದ ಒಂದು ವಿಷಯವನ್ನು ನಾನು ಒಪ್ಪಿಕೊಳ್ಳಲೇಬೇಕು” ಎಂದು ಕಂಗನಾ ಸಾಲು ಆರಂಭಿಸಿದ್ದರು.

“ಒಬ್ಬ ನಿಗೂಢ ವಿದೇಶಿ ಪ್ರಜೆ (ಸೋನಿಯಾ ಗಾಂಧಿ) ಗಾಂಧಿ ಕುಟುಂಬವನ್ನು ಪ್ರವೇಶಿಸುತ್ತಾರೆ. ಆನಂತರ ಇಂದಿರಾ ಗಾಂಧಿ ಹತ್ಯೆಯಾಗುತ್ತಾರೆ. ಬಳಿಕ ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಹೀಗೆ ಅಧಿಕಾರ ವಹಿಸಿಕೊಳ್ಳಬೇಕಿದ್ದ ಎಲ್ಲ ಸಂಭಾವ್ಯ ಉತ್ತರಾಧಿಕಾರಿಗಳು ಕೊಲ್ಲಲ್ಪಡುತ್ತಾರೆ. ಕೊನೆಗೆ ಅನುಕಂಪದ ಆಧಾರದ ಮೇಲೆ ಸಿಂಹಾಸನಕ್ಕೆ ಉಳಿದಿದ್ದು ಒಬ್ಬರೇ ಆಯ್ಕೆ. ಅವರೇ ಸೋನಿಯಾ ಗಾಂಧಿ ಎಂಬ ವಿದೇಶಿ ಪ್ರಜೆ” ಎಂದು ಬರೆಯುವ ಮೂಲಕ ಗಾಂಧಿ ಕುಟುಂಬದವರ ಕೊಲೆಗೆ ಸೋನಿಯಾ ಕಾರಣ ಎಂಬಂತೆ ಪರೋಕ್ಷವಾಗಿ ಆರೋಪಿಸಿದ್ದರು. “ಇಲ್ಲಿ ಹಲವಾರು ಕಾಕತಾಳೀಯ ಘಟನೆಗಳು ನಡೆದಿವೆ ಎಂದು ಜನರು ಯೋಚಿಸಲೇ ಇಲ್ಲ. ಅಷ್ಟೇ ಅಲ್ಲದೆ, ಆ ವಿದೇಶಿ ಮಹಿಳೆ ಬಹಿರಂಗವಾಗಿಯೇ ವಿದೇಶಿ ಅಜೆಂಡಾಗಳನ್ನು ಪ್ರಚಾರ ಮಾಡಿದರು. ಭಯೋತ್ಪಾದಕರಿಗಾಗಿ ಮೊಸಳೆ ಕಣ್ಣೀರು ಸುರಿಸಿದರು. ಆದರೂ 2014ರ ಬದಲಾವಣೆ ಬರುವವರೆಗೂ, ದಶಕಗಳ ಕಾಲ ಸರ್ಕಾರವನ್ನು ಮುನ್ನಡೆಸುವಲ್ಲಿ ಅವರು ಯಶಸ್ವಿಯಾದರು” ಎಂದು ಕಂಗನಾ ವಿವಾದಾತ್ಮಕ ಬರಹ ಪ್ರಕಟಿಸಿದ್ದರು.

ಸೈಬರ್ ವಿಧಿವಿಜ್ಞಾನ ತನಿಖೆಗೆ ಮನವಿ; ಪೊಲೀಸರಿಂದ ತನಿಖೆ ಚುರುಕು!
ನವೆಂಬರ್ 12ರ ಸಂಜೆ ಹಿಮಾಚಲ ಪ್ರದೇಶ ಡಿಜಿಪಿ ಅವರಿಗೆ ಇಮೇಲ್ ಮೂಲಕ ಅತುಲ್ ಶರ್ಮಾ ದೂರು ಸಲ್ಲಿಸಿದ್ದರು. ಇಂತಹ ಬರಹಗಳು ಸಮಾಜದಲ್ಲಿ ದ್ವೇಷ ಹರಡುತ್ತವೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಈ ಪೋಸ್ಟ್ನ ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಿ ತಕ್ಷಣವೇ ಸೈಬರ್ ವಿಧಿವಿಜ್ಞಾನ ತನಿಖೆ (Cyber Forensic Investigation) ನಡೆಸುವಂತೆ ಮನವಿ ಮಾಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಶಿಮ್ಲಾ ಎಸ್ಪಿ ಗೌರವ್ ಸಿಂಗ್ ಖಚಿತಪಡಿಸಿದ್ದು, ಸದ್ಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಎಂಬ ಆತ್ಮಚರಿತ್ರೆ ಬಿಡುಗಡೆಯಾದ ದಿನವೇ ಕಂಗನಾ ಈ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಉದ್ದೇಶಪೂರ್ವಕವಾಗಿಯೇ ಈ ರೀತಿ ಬರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


