ಬೆಂಗಳೂರು: ದೇಶಾದ್ಯಂತ ಇಂದು ‘ಮಕ್ಕಳ ದಿನಾಚರಣೆ’ (Children’s Day)ಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ (Pandit Jawaharlal Nehru) ಅವರ ಜನ್ಮದಿನವಾದ ನವೆಂಬರ್ 14ರನ್ನು ಪ್ರತಿವರ್ಷ ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಮತ್ತು ಪ್ರತಿಭಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಪಂಡಿತ್ ನೆಹರೂ ಅವರನ್ನು ‘ಚಾಚಾ ನೆಹರೂ’ ಎಂದು ಕರೆಯಲು ಕಾರಣವೇನು?
ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ ಹಾಗೂ ವಾತ್ಸಲ್ಯವಿತ್ತು. “ಇಂದಿನ ಮಕ್ಕಳೇ ನಾಳಿನ ಭಾರತವನ್ನು ನಿರ್ಮಿಸುತ್ತಾರೆ. ನಾವು ಅವರನ್ನು ಬೆಳೆಸುವ ರೀತಿಯೇ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂಬುದು ನೆಹರೂ ಅವರ ದೃಢ ನಂಬಿಕೆಯಾಗಿತ್ತು. ಮಕ್ಕಳೊಂದಿಗಿನ ಅವರ ಆತ್ಮೀಯ ಒಡನಾಟದಿಂದಾಗಿ ಮಕ್ಕಳೆಲ್ಲರೂ ಅವರನ್ನು ಪ್ರೀತಿಯಿಂದ ‘ಚಾಚಾ ನೆಹರೂ’ (Chacha Nehru) ಎಂದು ಕರೆಯುತ್ತಿದ್ದರು. ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸಮಗ್ರ ಬೆಳವಣಿಗೆಗೆ ಅವರು ಅಪಾರ ಒತ್ತು ನೀಡಿದ್ದರು.

ಇದನ್ನೂ ಓದಿ: ಚಳಿಗಾಲದಲ್ಲಿ ನೀವೂ ಈ ಸಣ್ಣ ತಪ್ಪುಗಳನ್ನು ಮಾಡುತ್ತಿದ್ದೀರಾ?: ಆರೋಗ್ಯ ಹಾಳು ಮಾಡುವ ಆ 7 ದಿನಚರಿಗಳು ಇಲ್ಲಿವೆ
ನವೆಂಬರ್ 14ರಂದೇ ಮಕ್ಕಳ ದಿನಾಚರಣೆ ಏಕೆ? (ಇತಿಹಾಸ ಮತ್ತು ಮಹತ್ವ):
ವಿಶ್ವ ಮಕ್ಕಳ ದಿನದಿಂದ ನವೆಂಬರ್ ೧೪ಕ್ಕೆ ಬದಲಾವಣೆ: 1964ಕ್ಕಿಂತ ಮೊದಲು ಭಾರತದಲ್ಲಿಯೂ ವಿಶ್ವಸಂಸ್ಥೆಯ ಘೋಷಣೆಯಂತೆ ನವೆಂಬರ್ 20ರಂದು ‘ವಿಶ್ವ ಮಕ್ಕಳ ದಿನ’ವನ್ನು ಆಚರಿಸಲಾಗುತ್ತಿತ್ತು.

ನೆಹರೂ ನಿಧನದ ಬಳಿಕ ನಿರ್ಧಾರ: 1964ರ ಮೇ 27ರಂದು ಪಂಡಿತ್ ಜವಾಹರಲಾಲ್ ನೆಹರೂ ಅವರು ನಿಧನರಾದ ಬಳಿಕ, ಮಕ್ಕಳ ಮೇಲಿನ ಅವರ ಅಪಾರ ಪ್ರೀತಿ ಮತ್ತು ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಭಾರತೀಯ ಸಂಸತ್ತಿನಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲಾಯಿತು. ಅಂದಿನಿಂದ ಪ್ರತಿವರ್ಷ ನೆಹರೂ ಅವರ ಜನ್ಮದಿನವಾದ ನವೆಂಬರ್ 14ರಂದು ರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ದಿನಾಚರಣೆಯ ಮುಖ್ಯ ಉದ್ದೇಶ: ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ, ಸುರಕ್ಷತೆ ಮತ್ತು ತಮ್ಮ ಹಕ್ಕುಗಳನ್ನು ಪಡೆಯುವ ವಾತಾವರಣ ನಿರ್ಮಿಸುವ ಜವಾಬ್ದಾರಿಯನ್ನು ಈ ದಿನವು ಸಮಾಜಕ್ಕೆ ನೆನಪಿಸುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



