ಅಕ್ಕಿ ದರ ದಿಢೀರ್ ಕುಸಿತ: ಸೋನಾ ಮಸೂರಿ ಕೆಜಿಗೆ ರೂ.20, ಕ್ವಿಂಟಲ್‌ಗೆ ರೂ.2,000 ಇಳಿಕೆ

ಬೆಂಗಳೂರು: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದ ಅಕ್ಕಿ ದರದಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಕೊಂಚ ನೆಮ್ಮದಿ ಸಿಕ್ಕಿದೆ. ರಾಜ್ಯದ ಮಾರುಕಟ್ಟೆಗಳಲ್ಲಿ ಸೋನಾ ಮಸೂರಿ ಅಕ್ಕಿಯ (Sona Masoori Rice) ಬೆಲೆಯಲ್ಲಿ ದಿಢೀರ್ ಕುಸಿತ ಕಂಡುಬಂದಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ 80ರಿಂದ 90 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಅಕ್ಕಿ, ಇದೀಗ 65ರಿಂದ 70 ರೂಪಾಯಿ ದರದಲ್ಲಿ ಲಭ್ಯವಾಗುತ್ತಿದ್ದು, ಪ್ರತಿ ಕೆಜಿಗೆ 10ರಿಂದ 20 ರೂಪಾಯಿವರೆಗೆ ಇಳಿಕೆಯಾಗಿದೆ.

ಕ್ವಿಂಟಲ್‌ಗೆ ಬರೋಬ್ಬರಿ ರೂ.2,000 ಕಡಿಮೆ; ಬೆಲೆ ಇಳಿಕೆಗೆ ಕಾರಣವೇನು?

Advertisement

ಈ ಹಿಂದೆ ಒಂದು ಕ್ವಿಂಟಲ್ ಅಕ್ಕಿಯ ಬೆಲೆ ಸುಮಾರು 8,500 ರೂಪಾಯಿ ಆಸುಪಾಸಿನಲ್ಲಿತ್ತು. ಇದೀಗ ಅದು 6,500 ರೂಪಾಯಿಗೆ ಇಳಿದಿದ್ದು, ಕ್ವಿಂಟಲ್‌ಗೆ ಬರೋಬ್ಬರಿ 2,000 ರೂಪಾಯಿ ಕಡಿಮೆಯಾಗಿದೆ. ಇತ್ತೀಚೆಗೆ ಭತ್ತದ ಪೂರೈಕೆಯಲ್ಲಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಬರಗಾಲದ ಬೆನ್ನಲ್ಲೇ ಅಕ್ಕಿ ಬೆಲೆ ಏರಿಕೆಯ ಬರೆ ಬಿದ್ದಿತ್ತು. ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ಬೆಳೆ ಕಡಿಮೆಯಿದ್ದರೂ, ಕೃಷ್ಣಾ ನದಿ ಪಾತ್ರದಲ್ಲಿ ಉತ್ತಮ ಬೆಳೆ ಬೆಳೆಯಲಾಗಿದೆ. ಇದರ ಜೊತೆಗೆ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಭತ್ತದ ಪೂರೈಕೆ ಹೆಚ್ಚಾಗಿದೆ. ಕಟಾವು ಕಾರ್ಯ ಪೂರ್ಣಗೊಂಡು ಭತ್ತ ಮಾರುಕಟ್ಟೆ ಹಾಗೂ ಅಕ್ಕಿ ಗಿರಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ದರ ಇಳಿಕೆಯಾಗಿದೆ.

ಇದನ್ನೂ ಓದಿ:

Advertisement

ದಾಸ್ತಾನು ಮಿತಿ ಕಡಿಮೆ ಮಾಡಿದರೆ ಮತ್ತೆ ಬೆಲೆ ಏರಿಕೆ ಭೀತಿ!

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ಅವರು ಪ್ರಚಲಿತ ಸ್ಥಿತಿಗತಿ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅಕ್ಕಿ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಅನುಕೂಲವಾಗುವುದರ ಜೊತೆಗೆ, ಭತ್ತ ಬೆಳೆದ ರೈತರಿಗೂ ಉತ್ತಮ ಬೆಲೆ ಸಿಗುತ್ತಿದೆ. ಒಂದು ವೇಳೆ ಸರ್ಕಾರ ಅಕ್ಕಿ ದಾಸ್ತಾನು ಮಿತಿಯನ್ನು (Stock Limit) ಮತ್ತಷ್ಟು ಕಡಿಮೆ ಮಾಡಿದರೆ ಅಕ್ಕಿ ಗಿರಣಿಗಳಿಗೆ ತೊಂದರೆಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಅಕ್ಕಿ ಬೆಲೆ ಏರಿಕೆಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದು, ಸರ್ಕಾರ ದಾಸ್ತಾನು ಮಿತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

ಬೇಸಿಗೆಯಲ್ಲಿ ಹೊಸ ಭತ್ತದ ಬೆಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ, ಈಗ ಮಾರುಕಟ್ಟೆಗೆ ಬರುತ್ತಿರುವ ಭತ್ತವನ್ನೇ ಅವಲಂಬಿಸಬೇಕಿದೆ. ಸದ್ಯ ಸಂಗ್ರಹವಾಗುವ ಭತ್ತದ ದಾಸ್ತಾನಿನಲ್ಲೇ ಮುಂದಿನ ಒಂದು ವರ್ಷದವರೆಗೆ ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸಾವಿತ್ರಿ ಪುರುಷೋತ್ತಮ ವಿವರಿಸಿದ್ದಾರೆ.