ಆಧಾರ್ ಕಾರ್ಡ್ ವ್ಯಕ್ತಿಯ ವಯಸ್ಸು ಅಥವಾ ಜನ್ಮ ದಿನಾಂಕಕ್ಕೆ ಅಂತಿಮ ಪುರಾವೆಯಲ್ಲ ಎಂದ ಹೈಕೋರ್ಟ್

ಬೆಂಗಳೂರು: ಆಧಾರ್ ಕಾರ್ಡ್ (Aadhaar Card) ಪ್ರಾಥಮಿಕವಾಗಿ ಒಂದು ಗುರುತಿನ ದಾಖಲೆಯಾಗಿದೆಯೇ ಹೊರತು, ಅದನ್ನು ವ್ಯಕ್ತಿಯ ವಯಸ್ಸು ಅಥವಾ ಜನ್ಮ ದಿನಾಂಕಕ್ಕೆ ನಿರ್ಣಾಯಕ/ಅಂತಿಮ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಮೃತ ವ್ಯಕ್ತಿಯ ವಯಸ್ಸನ್ನು ದೃಢಪಡಿಸಲು ಬೇರೆ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದಿದ್ದಾಗ, ಮರಣೋತ್ತರ ಪರೀಕ್ಷಾ ವರದಿಯಲ್ಲಿ (Post-mortem report) ಉಲ್ಲೇಖಿಸಲಾದ ವಯಸ್ಸನ್ನು ಅವಲಂಬಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಂಗಳೂರಿನ ಮೋಟಾರು ಅಪಘಾತ ಪರಿಹಾರ ಪ್ರಕರಣದ ಹಿನ್ನೆಲೆ:

Advertisement

ಗಾರೆ ಕೆಲಸ (Mason) ಮಾಡುತ್ತಿದ್ದ ಶರೀಫ್ ಎಂಬುವವರು ಡಿಸೆಂಬರ್ 18, 2021ರಂದು ಮೈಸೂರಿನಿಂದ ಗುರುವಾಯನಕೆರೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೇಲೂರು-ಮೂಡಿಗೆರೆ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಘಟನೆ ಬಳಿಕ ಮಂಗಳೂರಿನ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (MACT) ಮೃತರ ಕುಟುಂಬಕ್ಕೆ ₹26,73,100 ಪರಿಹಾರ ಘೋಷಿಸಿತ್ತು. ಆದರೆ, ಶರೀಫ್ ಅವರ ವಯಸ್ಸಿನ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಅವರ ಆಧಾರ್ ಕಾರ್ಡ್‌ನಲ್ಲಿ ವಯಸ್ಸು 35 ವರ್ಷ 7 ತಿಂಗಳು ಎಂದು ನಮೂದಾಗಿದ್ದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ 32 ವರ್ಷ ಎಂದು ದಾಖಲಾಗಿತ್ತು. ನ್ಯಾಯಮಂಡಳಿಯು ಆಧಾರ್ ವಿವರಗಳನ್ನು ಆಧರಿಸಿ ಅವರ ವಯಸ್ಸನ್ನು 36 ವರ್ಷ ಎಂದು ಪರಿಗಣಿಸಿ ಪರಿಹಾರ ಲೆಕ್ಕಾಚಾರ ಮಾಡಿತ್ತು. ಇದನ್ನು ಪ್ರಶ್ನಿಸಿ ಶರೀಫ್ ಅವರ ಪತ್ನಿ ಸಕೀನಾ, ಪುತ್ರಿ ಮತ್ತು ತಾಯಿ ಪರಿಹಾರ ಹೆಚ್ಚಳ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪರಿಹಾರ ಮೊತ್ತ ₹1.95 ಲಕ್ಷ ಹೆಚ್ಚಿಸಿದ ಹೈಕೋರ್ಟ್:

Advertisement

ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ (Justice K S Bharath Kumar) ಅವರ ಏಕಸದಸ್ಯ ಪೀಠವು, ಮೃತರ ನೈಜ ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸನ್ನು ಅವಲಂಬಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ದಾಖಲಾದ 32 ವರ್ಷದ ವಯಸ್ಸನ್ನು ಪುರಸ್ಕರಿಸಿದ ಹೈಕೋರ್ಟ್, ಪರಿಹಾರದ ಮೊತ್ತವನ್ನು ₹26,73,100 ರಿಂದ ₹28,68,000ಕ್ಕೆ ಹೆಚ್ಚಿಸಿದ್ದು, ಕುಟುಂಬಕ್ಕೆ ಹೆಚ್ಚುವರಿಯಾಗಿ ₹1.95 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಹೆಚ್ಚುವರಿ ಪರಿಹಾರ ಮೊತ್ತವನ್ನು ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ (United India Insurance Company) ನ್ಯಾಯಾಲಯ ನಿರ್ದೇಶನ ನೀಡಿದೆ.

Advertisement

ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲಿ ಧಾರ್ಮಿಕ ಕಟ್ಟಡಕ್ಕೆ ಜಾಗವಿಲ್ಲ: ಕೃಷಿ ಭವನದ ಶತಮಾನದ ಹಳೆಯ ಮಸೀದಿ ತೆರವಿಗೆ ಹೈಕೋರ್ಟ್‌ಗೆ ಕೇಂದ್ರ ಅಫಿಡವಿಟ್

ವಿಮಾ ಕಂಪನಿಯ ವಾದ ತಿರಸ್ಕರಿಸಿದ ಪೀಠ; ಸುಪ್ರೀಂ ತೀರ್ಪು ಉಲ್ಲೇಖ:

ವಿಚಾರಣೆ ವೇಳೆ, ಮೃತರ ವಯಸ್ಸನ್ನು ಸಾಬೀತುಪಡಿಸಲು ಕುಟುಂಬಸ್ಥರು ಬೇರೆ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ವಿಮಾ ಕಂಪನಿ ವಾದಿಸಿತ್ತು. ಆದರೆ ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿತು. ‘ಸುನೀತಾ ಮತ್ತು ಇತರರು vs ವಿನೋದ್ ಸಿಂಗ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ವ್ಯಕ್ತಿಯ ವಯಸ್ಸನ್ನು ಸ್ಥಾಪಿಸಲು ಬೇರೆ ಯಾವುದೇ ದಾಖಲೆಗಳು ಲಭ್ಯವಿಲ್ಲದಿದ್ದಾಗ ಮರಣೋತ್ತರ ಪರೀಕ್ಷಾ ವರದಿಯನ್ನು ವೈಜ್ಞಾನಿಕ ಮೌಲ್ಯಮಾಪನವೆಂದು ಪರಿಗಣಿಸಿ ವಯಸ್ಸು ನಿರ್ಧರಿಸಲು ಅವಲಂಬಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ