ನಿಡ್ಪಳ್ಳಿ ಶಾಲೆಯ 14 ಮಕ್ಕಳ ಟೂರ್ ವೆಚ್ಚ ಭರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಹಣಕಾಸಿನ ತೊಂದರೆಯಿಂದ ಶಾಲಾ ಪ್ರವಾಸಕ್ಕೆ ತೆರಳಲು ಸಾಧ್ಯವಾಗದ ನಿಡ್ಪಳ್ಳಿ ಗ್ರಾಮದ ಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಯ 14 ವಿದ್ಯಾರ್ಥಿಗಳಿಗೆ ಶಾಸಕ ಅಶೋಕ್ ರೈ ಅವರು ಆರ್ಥಿಕ ನೆರವು ಒದಗಿಸುವ ಮೂಲಕ ಮಕ್ಕಳ ಪ್ರವಾಸದ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ.

ಕೆಲವು ದಿನಗಳ ಹಿಂದೆ ಶಾಸಕ ಅಶೋಕ್ ರೈ ಅವರು ಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತರಗತಿ ಕೋಣೆಯಲ್ಲಿ ಶಿಕ್ಷಕಿಯರು ವಿದ್ಯಾರ್ಥಿಗಳೊಂದಿಗೆ ಶಾಲಾ ಪ್ರವಾಸದ ಕುರಿತು ಚರ್ಚಿಸುತ್ತಿದ್ದರು. ತರಗತಿಗೆ ತೆರಳಿದ ಶಾಸಕರು ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಪ್ರವಾಸಕ್ಕೆ ಯಾರೆಲ್ಲಾ ಬರುತ್ತೀರಿ ಎಂದು ವಿಚಾರಿಸಿದ್ದರು.

Advertisement

ಇದನ್ನೂ ಓದಿ: ಹಳೆ ಚಪ್ಪಲಿ ಹಿಡಿದು ಶಾಸಕರ ಕಚೇರಿಗೆ ಹೋಗಿ ಪ್ರಶ್ನಿಸಿ: ಬೆಳ್ತಂಗಡಿ ಶಾಸಕರ ವಿರುದ್ಧ ಅಶೋಕ್ ರೈ ವಾಗ್ದಾಳಿ 

ಈ ವೇಳೆ 14 ಮಂದಿ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುತ್ತಿಲ್ಲ ಎಂಬ ವಿಚಾರವನ್ನು ಶಿಕ್ಷಕಿ ಶಾಸಕರ ಗಮನಕ್ಕೆ ತಂದಿದ್ದರು. ಇದಕ್ಕೆ ಕಾರಣವೇನೆಂದು ಶಾಸಕರು ಮಕ್ಕಳನ್ನು ವಿಚಾರಿಸಿದಾಗ, ಹಣದ ಕೊರತೆಯಿಂದಾಗಿ ಈ ಬಾರಿ ಪ್ರವಾಸಕ್ಕೆ ಹೋಗುವುದು ಬೇಡ ಎಂದು ಅಮ್ಮ ಹೇಳಿದ್ದಾರೆ ಎಂದು ಮಕ್ಕಳು ಮುಗ್ಧವಾಗಿ ಉತ್ತರಿಸಿದ್ದರು.

Advertisement

ಪುಟ್ಟ ಮಕ್ಕಳ ಮಾತು ಕೇಳಿ ಭಾವುಕರಾದ ಶಾಸಕ ಅಶೋಕ್ ರೈ ಅವರು, ಆರ್ಥಿಕ ಅಡಚಣೆಯಿಂದ ಪ್ರವಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 14 ಮಂದಿ ವಿದ್ಯಾರ್ಥಿಗಳ ಪ್ರವಾಸದ ವೆಚ್ಚವನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದ್ದರು.

ಅದರಂತೆ, ಸೋಮವಾರ ಶಾಸಕರ ಕಚೇರಿಗೆ ಆಗಮಿಸಿದ ಶಾಲೆಯ ಶಿಕ್ಷಕಿಯ ಮೂಲಕ ವಿದ್ಯಾರ್ಥಿಗಳ ಪ್ರವಾಸಕ್ಕೆ ಅಗತ್ಯವಾದ ಹಣವನ್ನು ಹಸ್ತಾಂತರಿಸಿದ್ದಾರೆ. ಈ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕರು, ಆರ್ಥಿಕ ಸಂಕಷ್ಟದಿಂದ ಶಾಲಾ ಪ್ರವಾಸದ ಸಂಭ್ರಮದಿಂದ ದೂರ ಉಳಿಯಬೇಕಾಗಿದ್ದ 14 ಮಂದಿ ಮಕ್ಕಳಿಗೂ ಪ್ರವಾಸಕ್ಕೆ ತೆರಳುವ ಅವಕಾಶ ಕಲ್ಪಿಸಿದ್ದಾರೆ.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ