ಕೈರೋ : ಈಜಿಪ್ಟ್ ರಾಜಧಾನಿ ಕೈರೋ ಸುತ್ತಮುತ್ತಲಿನ ಪ್ರಮುಖ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇಂಧನ ಟ್ಯಾಂಕರ್‌ವೊಂದು ಭೀಕರ ಬೆಂಕಿಗೆ ಆಹುತಿಯಾದ ಪರಿಣಾಮ ಕನಿಷ್ಠ 31 ಮಂದಿ ಮೃತಪಟ್ಟು, 21 ಜನರು ಗಾಯಗೊಂಡಿರುವ ದಾರುಣ ಘಟನೆ ಬುಧವಾರ (ನವೆಂಬರ್ 25) ನಡೆದಿದೆ. ಗ್ರೇಟರ್ ಕೈರೋ ವ್ಯಾಪ್ತಿಯ ಗೀಜಾ ಭಾಗದ ಜನನಿಬಿಡ ಪ್ರದೇಶವಾದ ವರಾಕ್‌ನ (Waraq) ರಿಂಗ್ ರೋಡ್‌ನಲ್ಲಿ ಈ ದುರಂತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ 24ಕ್ಕೂ ಹೆಚ್ಚು ಕಾರು ಮತ್ತು ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ವಾಹನಗಳ ನಡುವೆ ಹಬ್ಬಿದ ಬೆಂಕಿ; ಉರಿಯುವ ಕಾರಿನೊಳಗೆ ಸಿಲುಕಿದ ಜನ:

ಅಪಘಾತದ ಬೆನ್ನಲ್ಲೇ ವಾಹನಗಳ ನಡುವೆ ವೇಗವಾಗಿ ಬೆಂಕಿ ಹರಡಿದ್ದು, ಹಲವರು ಉರಿಯುವ ಕಾರುಗಳ ಒಳಗೆ ಸಿಲುಕಿಕೊಂಡರು. ಅಸೋಸಿಯೇಟೆಡ್ ಪ್ರೆಸ್ (AP) ವರದಿ ಮಾಡಿರುವ ವಿಡಿಯೋ ದೃಶ್ಯಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವಾಗಲೇ ರಕ್ಷಣಾ ಸಿಬ್ಬಂದಿ ವಾಹನಗಳಿಂದ ಸಂತ್ರಸ್ತರನ್ನು ಹೊರತೆಗೆಯುತ್ತಿರುವುದು ಕಂಡುಬಂದಿದೆ. ಕೈರೋ ಉಪನಗರವಾದ ಇಂಬಾಬಾದ್‌ನ ವರಾಕ್ ಜಿಲ್ಲೆಯ ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು.
ರಸ್ತೆ ಬಂದ್ ಆಗಿದ್ದರಿಂದ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಅಹ್ಮದ್ ಸಮೀರ್ ಎಂಬುವವರು ಮಾತನಾಡಿ, “ಇಂಧನ ಟ್ಯಾಂಕರ್ ಮತ್ತು ಹಲವು ಕಾರುಗಳು ಬೆಂಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯುವುದನ್ನು ನಾನು ಕಂಡೆ. ಸುಟ್ಟು ಹೋದ ವಾಹನಗಳಿಂದ ಕನಿಷ್ಠ ಎಂಟು ಶವಗಳನ್ನು ಹೊರತೆಗೆದಿದ್ದನ್ನೂ ನೋಡಿದೆ. ಅದು ಭೀಕರ ಬೆಂಕಿಯಾಗಿತ್ತು; ಬೆಂಕಿಯಿಂದಾಗಿ ಕಾರುಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ಅದು ಅತ್ಯಂತ ಆಘಾತಕಾರಿ ದೃಶ್ಯವಾಗಿತ್ತು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Accident : ಕಾರು-ಟ್ರಕ್ ಭೀಕರ ಅಪಘಾತದಲ್ಲಿ ಮಾಜಿ ಗೃಹ ಸಚಿವರ ಪುತ್ರಿ ಸೇರಿ ಮೂವರ ದುರ್ಮರಣ
ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ; ಮೃತರ ಗುರುತು ಪತ್ತೆಗೆ DNA ಪರೀಕ್ಷೆ:

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ತಾವು ಘಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ಈಜಿಪ್ಟ್ ಆರೋಗ್ಯ ಸಚಿವ ಖಾಲಿದ್ ಅಬ್ದೆಲ್ ಘಫಾರ್ ತಿಳಿಸಿದ್ದಾರೆ. ಸದ್ಯದ ಸಾವಿನ ಸಂಖ್ಯೆ ಪ್ರಾಥಮಿಕವಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಮೃತರ ಗುರುತು ಪತ್ತೆಹಚ್ಚಲು DNA ಪರೀಕ್ಷೆಗಳು ಪ್ರಗತಿಯಲ್ಲಿವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ದುರಂತದಲ್ಲಿ ಮೃತಪಟ್ಟವರಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಸಂತಾಪ ಸೂಚಿಸಿದ್ದಾರೆ.

