ಮಂಗಳೂರು: ಸರಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಹಾಗೂ ಕಳವಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಪೊಲೀಸರು ಗಮನಾರ್ಹ ಸಾಧನೆ ಮಾಡಿದ್ದಾರೆ. 2025ನೇ ಸಾಲಿನಲ್ಲಿ ವರದಿಯಾದ ಎಲ್ಲಾ ಸರಗಳ್ಳತನ ಪ್ರಕರಣಗಳಲ್ಲಿ ಪೊಲೀಸರು ಶೇ. 100ರಷ್ಟು ಪತ್ತೆ ದರ (Detection Rate) ಸಾಧಿಸಿದ್ದು, ಕಳವಾದ ಸುಮಾರು ₹17.03 ಲಕ್ಷ ಮೌಲ್ಯದ 145 ಗ್ರಾಂ ಚಿನ್ನಾಭರಣಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ.
2025ರ ಸರಗಳ್ಳತನ ಪ್ರಕರಣಗಳು: 7ಕ್ಕೆ 7 ಪ್ರಕರಣ ಪತ್ತೆ, 9 ಆರೋಪಿಗಳ ಬಂಧನ:

2025ರಲ್ಲಿ ಮಂಗಳೂರು ವ್ಯಾಪ್ತಿಯಲ್ಲಿ ಒಟ್ಟು 7 ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳನ್ನೂ ಯಶಸ್ವಿಯಾಗಿ ಭೇದಿಸಿರುವ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದು, ಕದ್ದೊಯ್ದಿದ್ದ 145 ಗ್ರಾಂ ಚಿನ್ನಾಭರಣಗಳನ್ನು (ಅಂದಾಜು ಮೌಲ್ಯ ₹17.03 ಲಕ್ಷ) ಸಂಪೂರ್ಣವಾಗಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅಂಗವಿಕಲನಂತೆ ನಟಿಸಿ ಭಿಕ್ಷೆ, ಮೊಬೈಲ್ ಕಳ್ಳತನ: ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಕಳ್ಳನಿಗೆ ಧರ್ಮದೇಟು

2026ರ ಸ್ಥಿತಿಗತಿ: 6 ಪ್ರಕರಣಗಳಲ್ಲಿ 4 ಪತ್ತೆ; 40 ಗ್ರಾಂ ಚಿನ್ನ ವಶಕ್ಕೆ ಬಾಕಿ:
2026ನೇ ಸಾಲಿನಲ್ಲಿ ಈವರೆಗೆ ಒಟ್ಟು 6 ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಪೊಲೀಸರು 4 ಪ್ರಕರಣಗಳನ್ನು ಪತ್ತೆ ಹಚ್ಚಿ 6 ಆರೋಪಿಗಳನ್ನು ಬಂಧಿಸಿದ್ದು, ಇನ್ನೂ 2 ಪ್ರಕರಣಗಳು ಬಾಕಿ ಇವೆ. ₹3.50 ಲಕ್ಷ ಮೌಲ್ಯದ ಚಿನ್ನಕ್ಕೆ ಶೋಧ: 2026ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ₹7.55 ಲಕ್ಷ ಮೌಲ್ಯದ 72 ಗ್ರಾಂ ಚಿನ್ನಾಭರಣಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಸುಮಾರು ₹3.50 ಲಕ್ಷ ಮೌಲ್ಯದ ಇನ್ನೂ 40 ಗ್ರಾಂ ಚಿನ್ನ ವಶಪಡಿಸಿಕೊಳ್ಳಲು ಬಾಕಿ ಇದ್ದು, ಬಾಕಿ ಉಳಿದ ಆರೋಪಿಗಳ ಪತ್ತೆ ಮತ್ತು ಕಳವು ಮಾಲು ಜಪ್ತಿಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.


