ನವದೆಹಲಿ : ಭಾರತೀಯ ರೈಲ್ವೆಯಲ್ಲಿ ಹೆಚ್ಚುತ್ತಿರುವ ಸಾಮರ್ಥ್ಯ ಕೊರತೆಯ ಗಂಭೀರ ಚಿತ್ರಣ ಬಹಿರಂಗವಾಗಿದ್ದು, 2025-26ನೇ ಹಣಕಾಸು ವರ್ಷದಲ್ಲಿ 3.39 ಕೋಟಿಗೂ ಹೆಚ್ಚು ಪ್ರಯಾಣಿಕರು ದೃಢೀಕೃತ ಟಿಕೆಟ್ ಸಿಗದೆ ಪ್ರಯಾಣದಿಂದ ವಂಚಿತರಾಗಿದ್ದಾರೆ. ವೇಯ್ಟಿಂಗ್ ಲಿಸ್ಟ್ ಟಿಕೆಟ್‌ಗಳು ಕನ್ಫರ್ಮ್ ಆಗದೇ ಸ್ವಯಂಚಾಲಿತವಾಗಿ ರದ್ದಾದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಸಂಕಷ್ಟ ಅನುಭವಿಸಿದ್ದಾರೆ.
ಆರ್‌ಟಿಐ ಮೂಲಕ ಲಭ್ಯವಾದ ಮಾಹಿತಿಯ ಪ್ರಕಾರ, ಪ್ರತಿದಿನ ಸರಾಸರಿ 92,877 ಪ್ರಯಾಣಿಕರು ಟಿಕೆಟ್ ದೃಢೀಕರಣ ಸಿಗದೆ ಪ್ರಯಾಣ ಅವಕಾಶ ಕಳೆದುಕೊಂಡಿದ್ದಾರೆ. ಅಂದರೆ ಪ್ರತಿ ಗಂಟೆಗೆ ಸುಮಾರು 3,870 ಜನರು ಹಾಗೂ ಪ್ರತಿ ನಿಮಿಷಕ್ಕೆ 64ಕ್ಕೂ ಹೆಚ್ಚು ಜನರು ರೈಲು ಏರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ರದ್ದು! ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಈಗ ಸಿಬಿಐ ತೆಕ್ಕೆಗೆ
ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2021-22ರಲ್ಲಿ 1.65 ಕೋಟಿ ಪ್ರಯಾಣಿಕರು ವಂಚಿತರಾಗಿದ್ದರೆ, 2022-23ರಲ್ಲಿ ಅದು 2.72 ಕೋಟಿಗೆ, 2023-24ರಲ್ಲಿ 2.96 ಕೋಟಿಗೆ, 2024-25ರಲ್ಲಿ 3.27 ಕೋಟಿಗೆ ಏರಿಕೆಯಾಗಿ, ಇದೀಗ 2025-26ರಲ್ಲಿ 3.39 ಕೋಟಿಗೆ ತಲುಪಿದೆ.
ಸ್ಲೀಪರ್ ಕ್ಲಾಸ್ ಪ್ರಯಾಣಿಕರೇ ಅತಿಹೆಚ್ಚು ಹೊಡೆತ ಅನುಭವಿಸಿದ್ದು, ಸುಮಾರು 1.68 ಕೋಟಿ ಜನರು ಕನ್ಫರ್ಮ್ ಟಿಕೆಟ್ ಸಿಗದೆ ಪ್ರಯಾಣ ತಪ್ಪಿಸಿಕೊಂಡಿದ್ದಾರೆ. ನಂತರ 3ಎಸಿ ವಿಭಾಗದಲ್ಲಿ 74.55 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳು, ಕಾರ್ಮಿಕರು, ಕಡಿಮೆ ಆದಾಯದ ಕುಟುಂಬಗಳು ಮತ್ತು ಗ್ರಾಮೀಣ ಪ್ರದೇಶದ ಜನರು ಇದರಿಂದ ಹೆಚ್ಚಾಗಿ ಬಾಧಿತರಾಗಿದ್ದಾರೆ.
ಸ್ವಾತಂತ್ರ್ಯಕ್ಕೆ 78 ವರ್ಷವಾದರೂ ದೃಢೀಕೃತ ರೈಲು ಟಿಕೆಟ್ ಪಡೆಯುವುದು ಅದೃಷ್ಟದ ವಿಷಯವಾಗಬಾರದು” ಎಂದು ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ರೈಲುಗಳು, ಬೋಗಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ತುರ್ತಾಗಿ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡ


