ಕುಟುಂಬ, ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಪುರುಷರು ಮತ್ತು ಬಾಲಕರು ನೀಡುತ್ತಿರುವ ನಿಸ್ವಾರ್ಥ ಕೊಡುಗೆಯನ್ನು ಗೌರವಿಸಲು ಪ್ರತಿ ವರ್ಷ ನವೆಂಬರ್ 19ರಂದು ವಿಶ್ವಾದ್ಯಂತ ಅಂತರರಾಷ್ಟ್ರೀಯ ಪುರುಷರ ದಿನ (International Men’s Day – IMD) ಆಚರಿಸಲಾಗುತ್ತದೆ. ಪುರುಷರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಲಿಂಗ ಸಮಾನತೆಯನ್ನು ಉತ್ತೇಜಿಸುವುದು ಮತ್ತು ಸಮಾಜಕ್ಕೆ ಮಾದರಿಯಾಗುವ ಸಕಾರಾತ್ಮಕ ಪುರುಷ ವ್ಯಕ್ತಿತ್ವಗಳನ್ನು (Positive Male Role Models) ಗುರುತಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಅಂತರರಾಷ್ಟ್ರೀಯ ಪುರುಷರ ದಿನದ ಇತಿಹಾಸ

1960ರ ದಶಕದಿಂದಲೂ ಮಹಿಳಾ ದಿನಾಚರಣೆಯಂತೆಯೇ ಪುರುಷರಿಗೂ ಒಂದು ವಿಶೇಷ ದಿನ ಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದವು. 1992ರ ಫೆಬ್ರವರಿ 7ರಂದು ಅಮೆರಿಕದ ಥಾಮಸ್ ಓಸ್ಟರ್ (Thomas Oaster) ಅವರು ಮೊದಲ ಬಾರಿಗೆ ಪುರುಷರ ದಿನವನ್ನು ಆಚರಿಸಿದರು. ಈ ದಿನಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದು 1999ರಲ್ಲಿ. ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸ ಉಪನ್ಯಾಸಕರಾಗಿದ್ದ ಟ್ರಿನಿಡಾಡ್ ಮತ್ತು ಟೊಬಾಗೊ ಮೂಲದ ಡಾ. ಜೆರೋಮ್ ಟೀಲುಕ್‌ಸಿಂಗ್ (Dr. Jerome Teelucksingh) ಅವರು 1999ರ ನವೆಂಬರ್ 19ರಂದು ಅಂತರರಾಷ್ಟ್ರೀಯ ಪುರುಷರ ದಿನವನ್ನು ಪುನರುಜ್ಜೀವನಗೊಳಿಸಿದರು. ಸಮಾಜಕ್ಕೆ ಉತ್ತಮ ಮಾರ್ಗದರ್ಶಕರಾಗಿದ್ದ ತಮ್ಮ ತಂದೆಯ ಜನ್ಮದಿನದ ಸವಿನೆನಪಿಗಾಗಿ ಅವರು ನವೆಂಬರ್ 19ನೇ ದಿನಾಂಕವನ್ನು ಆಯ್ಕೆ ಮಾಡಿಕೊಂಡರು.
ಭಾರತದಲ್ಲಿ ಮೊದಲ ಬಾರಿಗೆ 2007ರ ನವೆಂಬರ್ 19ರಂದು ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಯಿತು. ಇಂದು ಭಾರತ ಸೇರಿದಂತೆ ವಿಶ್ವದ 80ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

026ರ ಥೀಮ್ ಮತ್ತು ಈ ದಿನದ ಪ್ರಮುಖ 6 ಆಧಾರಸ್ತಂಭಗಳು:
ಈ ವರ್ಷದ ಅಂತರರಾಷ್ಟ್ರೀಯ ಪುರುಷರ ದಿನದ ಅಧಿಕೃತ ಧ್ಯೇಯವಾಕ್ಯ “The Future Is Everyone” (ಭವಿಷ್ಯವು ಎಲ್ಲರಿಗೂ ಸೇರಿದ್ದು) ಎಂಬುದಾಗಿದೆ. ಉತ್ತಮ ಸಮಾಜ ಮತ್ತು ಭವಿಷ್ಯವನ್ನು ನಿರ್ಮಿಸುವುದು ಪುರುಷರು ಮತ್ತು ಮಹಿಳೆಯರಿಬ್ಬರ ಸಮಾನ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಇದು ಸಾರುತ್ತದೆ. ಪುರುಷರ ಮಾನಸಿಕ ಒತ್ತಡ ಹಾಗೂ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಜಾಗೃತಿ, ಪುರುಷರು ಮತ್ತು ಬಾಲಕರು ಎದುರಿಸುತ್ತಿರುವ ತಾರತಮ್ಯದ ನಿವಾರಣೆ, ಕುಟುಂಬ ಮತ್ತು ಮಕ್ಕಳ ಪಾಲನೆಯಲ್ಲಿ ತಂದೆಯ ಪಾತ್ರಕ್ಕೆ ಗೌರವ ನೀಡುವುದು ಹಾಗೂ ಲಿಂಗ ಸೌಹಾರ್ದತೆಯನ್ನು ಬೆಳೆಸುವುದು ಈ ದಿನದ ಪ್ರಮುಖ ಆಶಯಗಳಾಗಿವೆ.


