ಮಂಗಳೂರು: ಕರ್ನಾಟಕದ ಕರಾವಳಿ ಭಾಗದ ದಶಕಗಳ ಸುದೀರ್ಘ ಹಾಗೂ ನ್ಯಾಯಯುತ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಹಾಗೂ ಉಳ್ಳಾಲವರೆಗಿನ ಪ್ರಮುಖ ರೈಲ್ವೆ ಮಾರ್ಗಗಳನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ಬಿಡುಗಡೆಗೊಳಿಸಿ, ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಇಂದಿನಿಂದ (ಅಕ್ಟೋಬರ್ 1, 2026) ಈ ಐತಿಹಾಸಿಕ ಆದೇಶ ಜಾರಿಗೆ ಬಂದಿದೆ.
2003ರಿಂದ ಅಂದರೆ ಕಳೆದ 23 ವರ್ಷಗಳಿಂದ ಮಂಗಳೂರು ರೈಲ್ವೆ ವಲಯವನ್ನು ಕರ್ನಾಟಕದ ಆಡಳಿತ ವ್ಯಾಪ್ತಿಗೆ ತರಬೇಕೆಂಬ ಕರಾವಳಿ ಜನರ ನಿರಂತರ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಸಮ್ಮತಿ ನೀಡಿದ್ದು, ರಾಜ್ಯದಾದ್ಯಂತ ಅಪಾರ ಸಂತಸ ವ್ಯಕ್ತವಾಗಿದೆ.
Today is historic day for Karnataka 🔥
Coastal Karnataka’s long-pending demand is fulfilled. From 1 October 2026, Mangaluru Central, Junction, Panambur and the stretch up to Ullal move from Palakkad Division to Mysuru Division of South Western Railway.
People had sought this… pic.twitter.com/vMSIQsQPS1
— mudevi ತಂಗಿ 🥰 (@abhildooo) October 1, 2026
ಇದನ್ನೂ ಓದಿ: ಆಪತ್ಕಾಲದಲ್ಲೂ ಸಿಗಲಿದೆ ರಕ್ತ: ವಿಕ್ಟೋರಿಯಾ, ಕಿಮ್ಸ್, ವಿಮ್ಸ್, ವೆನ್ಲಾಕ್ ಆಸ್ಪತ್ರೆಗಳಿಗೆ ರಕ್ತ ಸಂಗ್ರಹಣಾ ವಾಹನಗಳ ಕೊಡುಗೆ
ಆಡಳಿತ ಸುಧಾರಣೆ ಮತ್ತು ಸಾರಿಗೆಗೆ ಬಿಗ್ ಬೂಸ್ಟ್:
ಮಂಗಳೂರು ರೈಲ್ವೆ ವ್ಯವಸ್ಥೆಯು ಕರಾವಳಿಯಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿದ್ದ ಕೇರಳದ ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ ಕಾರ್ಯಾಚರಿಸುತ್ತಿತ್ತು. ಇದರಿಂದಾಗಿ ಕರ್ನಾಟಕದ ರೈಲ್ವೆ ಅಭಿವೃದ್ಧಿ, ಹೊಸ ರೈಲುಗಳ ಚಾಲನೆ ಹಾಗೂ ರೈಲ್ವೆ ಯೋಜನೆಗಳಿಗೆ ತೀವ್ರ ಹಿನ್ನಡೆಯಾಗುತ್ತಿತ್ತು. ಮಂಗಳೂರು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಂಡಿರುವುದರಿಂದ ಇಂಟರ್ಚೇಂಜ್ ಸಮಸ್ಯೆಗಳು ನಿವಾರಣೆಯಾಗಿ, ರೈಲುಗಳ ಸಂಚಾರ ಸುಗಮವಾಗಲಿದೆ. ಪಣಂಬೂರು ಬಂದರು ಪ್ರದೇಶ ಮೈಸೂರು ವಿಭಾಗಕ್ಕೆ ಸೇರಿರುವುದರಿಂದ ಕರಾವಳಿಯಿಂದ ರಾಜ್ಯದ ಒಳನಾಡಿಗೆ ಸರಕು ರವಾನೆ (Port Freight) ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಬೆಂಗಳೂರು, ಮೈಸೂರು ಹಾಗೂ ರಾಜ್ಯದ ಇತರ ಭಾಗಗಳಿಗೆ ಮಂಗಳೂರಿನಿಂದ ಹೆಚ್ಛಿನ ರೈಲು ಸೇವೆಯನ್ನು ಕಲ್ಪಿಸಲು ಈ ನಿರ್ಧಾರ ಹಾದಿ ಸುಗಮಗೊಳಿಸಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 2024ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರ ಬಳಿ ಸತತ ನಿಯೋಗ ಕೊಂಡೊಯ್ದು ಮನವರಿಕೆ ಮಾಡಿಕೊಟ್ಟಿದ್ದರು.
ಇದರ ಫಲವಾಗಿ ಆಗಸ್ಟ್ 21, 2026 ರಂದು ರೈಲ್ವೆ ಮಂಡಳಿಯು ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವಂತೆ ಅಧಿಕೃತ ಆದೇಶ ಹೊರಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಈ ಕನ್ನಡಿಗರಪರ ನಿರ್ಧಾರಕ್ಕೆ ದಕ್ಷಿಣ ಕನ್ನಡದ ಜನರು ಹಾಗೂ ವಿವಿಧ ಸಂಘಟನೆಗಳು ಕೃತಜ್ಞತೆ ಸಲ್ಲಿಸಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

