ಬೆಂಗಳೂರು: ಕರ್ನಾಟಕದ ಸಾರಿಗೆ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಜಧಾನಿ ಬೆಂಗಳೂರಿನಲ್ಲಿ ಬಹುನಿರೀಕ್ಷಿತ ‘ಪಿಂಕ್ ಲೈನ್’ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ್ದು, ಬೆಂಗಳೂರಿಗರ ದೀರ್ಘಕಾಲದ ಕನಸು ಕೊನೆಗೂ ನನಸಾಗಿದೆ.
ಸುದ್ದಗುಂಟೆ ಪಾಳ್ಯ (ಎಸ್.ಜಿ.ಪಾಳ್ಯ) ಮೆಟ್ರೋ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ಪಿಂಕ್ ಮೆಟ್ರೋಗೆ ಹಸಿರು ನಿಶಾನೆ ತೋರಿದರು. ಈ ವೇಳೆ ಮೋದಿ ಜೊತೆ ರಾಜ್ಯಪಾಲೆ ಡಾ.ಸುಧಾ ಯಾದವ್, ಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೃಷ್ಣಬೈರೇಗೌಡ, ಸಂಸದ ತೇಜಸ್ವಿಸೂರ್ಯ ಅವರು ಮೆಟ್ರೋದಲ್ಲಿ ಪ್ರಯಾಣಿಸಿದರು.

ಬಳಿಕ ಐಐಎಂಬಿ ಆಡಿಟೋರಿಯಂನಲ್ಲಿ ನಡೆದ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಮೋದಿ, ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರಿ ಮಂಗಳೂರನ್ನು ಬೆಸೆಯುವ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೂ ಗ್ರೀನ್ ಸಿಗ್ನಲ್ ನೀಡಿದರು.
ಮಂಗಳೂರಿನಿಂದ ವಂದೇ ಭಾರತ್ಗೆ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ; MRPL ಟರ್ಮಿನಲ್ ಲೋಕಾರ್ಪಣೆ:
ಘಟ್ಟ ಪ್ರದೇಶದ ವಿದ್ಯುದ್ದೀಕರಣ ಪೂರ್ಣಗೊಂಡ ಬೆನ್ನಲ್ಲೇ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿಮೋದಿ ಅವರು ಚಾಲನೆ ನೀಡಿದ್ದು, ಮಂಗಳೂರಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲಿಗೆ ಹಸಿರು ನಿಶಾನೆ ತೋರಿದರು. ಈ ವೇಳೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಭಾರತದ ಜಿಡಿಪಿ ದರ ಶೇ. 7.8 ಕ್ಕೆ ಏರಿಕೆ: ನರೇಂದ್ರ ಮೋದಿ ಸಂತಸ, ಟೀಕಾಕಾರರಿಗೆ ಪ್ರಧಾನಿ ತಿರುಗೇಟು
ಇದೇ ವೇಳೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನ (MRPL) ಅತ್ಯಾಧುನಿಕ ‘ದೇವನಗೋಂತಿ ಮಾರ್ಕೆಟಿಂಗ್ ಟರ್ಮಿನಲ್’ ಅನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.


