ಮನಿಲಾ: ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆಯುತ್ತಿರುವ ಆಸಿಯಾನ್ (ASEAN) ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳ ನಡುವೆ ಮಂಗಳವಾರ ಮಹತ್ವದ ಕ್ವಾಡ್ (Quad) ನಾಯಕರ ಶೃಂಗಸಭೆ ಜರುಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಸನೇ ತಕೈಚಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಒಂದೇ ವೇದಿಕೆಯಲ್ಲಿ ಸೇರಿ ಮಹತ್ವದ ಮಾತುಕತೆ ನಡೆಸಿದರು. 2024ರ ಸೆಪ್ಟೆಂಬರ್ ನಂತರ ಮತ್ತು ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಕ್ವಾಡ್ ನಾಯಕರ ಶೃಂಗಸಭೆ ಇದಾಗಿದೆ.
“ಮೋದಿ ಬಹಳ ಗಟ್ಟಿ ಮನುಷ್ಯ, ಜಪಾನ್ ಪ್ರಧಾನಿ ಇನ್ನೂ ಗಟ್ಟಿಗಿತ್ತಿ” – ಟ್ರಂಪ್ ಮೆಚ್ಚುಗೆ:
ನಾಲ್ವರು ಕ್ವಾಡ್ ನಾಯಕರು ಒಟ್ಟಾಗಿ ನಿಂತು ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಅವರನ್ನು ಹಾಡಿಹೊಗಳಿದರು. “ಮೋದಿ ಬಹಳ ಗಟ್ಟಿ ಮನುಷ್ಯ (Very tough man). ಇನ್ನು ಜಪಾನ್ ಪ್ರಧಾನಿ ಸನೇ ತಕೈಚಿ ಅವರಿಗಿಂತಲೂ ಗಟ್ಟಿಗಿತ್ತಿ ಇರಬಹುದು. ಆಂಥೋನಿ ಅಲ್ಬನೀಸ್ ಮತ್ತು ನಾನು ಪರವಾಗಿಲ್ಲ,” ಎಂದು ಹಾಸ್ಯಮಿಶ್ರಿತ ಧಾಟಿಯಲ್ಲಿ ನಾಯಕರ ಸಾಮರ್ಥ್ಯವನ್ನು ಬಣ್ಣಿಸಿದರು.

ರಾಷ್ಟ್ರೀಯ ಭದ್ರತಾ ರಫ್ತು ನಿಯಂತ್ರಣ ಮೇಲ್ವಿಚಾರಣಾ ಸಮಿತಿ ಸ್ಥಾಪಿಸುವ ಚಿಪ್ ದೈತ್ಯ ಎನ್ವಿಡಿಯಾ (Nvidia) ನಿರ್ಧಾರವನ್ನು ಸ್ವಾಗತಿಸಿದ ಟ್ರಂಪ್, “ಅದೊಂದು ಉತ್ತಮ ಕಂಪನಿ, ಒಳ್ಳೆಯ ನಿರ್ಧಾರ” ಎಂದರು. ಇತ್ತೀಚಿನ ಮೈಕ್ರೋಸಾಫ್ಟ್ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಸೇವೆಗಳ ವ್ಯತ್ಯಯದ ಬಗ್ಗೆ ಕೇಳಿದಾಗ, “ಇದು ಜೀವನ. ನೀವು ದೊಡ್ಡವರು ಮತ್ತು ಶಕ್ತಿಶಾಲಿಯಾಗಿದ್ದಾಗ ಇಂತಹದ್ದೆಲ್ಲಾ ನಡೆಯುತ್ತದೆ, ಪರವಾಗಿಲ್ಲ” ಎಂದು ಪ್ರತಿಕ್ರಿಯಿಸಿದರು.
ರಷ್ಯಾ-ಇರಾನ್ ಸಂಘರ್ಷದ ಸಾವು-ನೋವು ಹಾಗೂ ಇರಾನ್ಗೆ ನೇರ ಎಚ್ಚರಿಕೆ:

ರಷ್ಯಾ-ಇರಾನ್ ಸಂಘರ್ಷದಲ್ಲಿ ಸಂಭವಿಸುತ್ತಿರುವ ಸಾವು-ನೋವುಗಳ ಕುರಿತು ಮಾತನಾಡಿದ ಟ್ರಂಪ್, “ಪ್ರತಿ ತಿಂಗಳು 25,000 ಜೀವಗಳು ಬಲಿಯಾಗುತ್ತಿವೆ. ಕಳೆದ ತಿಂಗಳು 32,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಇದನ್ನು ಊಹಿಸಿಕೊಳ್ಳಲು ಸಾಧ್ಯವೇ?” ಎಂದು ಕಳವಳ ವ್ಯಕ್ತಪಡಿಸಿದರು. ಇರಾನ್ನಿಂದ ವಾಷಿಂಗ್ಟನ್ ಡಿಸಿಗೆ ತಕ್ಷಣದ ಬೆದರಿಕೆ ಇದೆಯೇ ಎಂಬ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ಟ್ರಂಪ್, “ಒಂದು ವೇಳೆ ಅಂತಹ ಬೆದರಿಕೆ ಇದ್ದರೆ, ಇದುವರೆಗೆ ಯಾವುದೇ ದೇಶ ತೆರದಂತಹ ಭೀಕರ ಬೆಲೆಯನ್ನು ಇರಾನ್ ತೆರಬೇಕಾಗುತ್ತದೆ” ಎಂದು ನೇರ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ: ಮೊದಲ ಬಾರಿ ಆಟೋದಲ್ಲಿ ಬಂದ ಪ್ರಧಾನಿ ಮೋದಿ: ಫಿಲಿಪೈನ್ಸ್ನಲ್ಲಿ ಮೋದಿ ಹವಾ

ಚೀನಾ ಭೇಟಿಗೂ ಮುನ್ನ ಮೋದಿ-ಟ್ರಂಪ್ ಭೇಟಿಯ ಮಹತ್ವ :
ಮನಿಲಾ ಶೃಂಗಸಭೆಯ ಬೆನ್ನಲ್ಲೇ ಟ್ರಂಪ್ ಅವರು ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಗಾಗಿ ಚೀನಾದ ಶೆನ್ಜೆನ್ ನಗರಕ್ಕೆ ತೆರಳಲಿದ್ದು, ನವೆಂಬರ್ 19ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ-ಟ್ರಂಪ್ ಭೇಟಿ ರಾಜತಾಂತ್ರಿಕವಾಗಿ ಭಾರಿ ಮಹತ್ವ ಪಡೆದುಕೊಂಡಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ-ಫಿಲಿಪೈನ್ಸ್ ನಡುವಿನ ಕಡಲ ವಿವಾದ ಮತ್ತು ಭೌಗೋಳಿಕ ಉದ್ವಿಗ್ನತೆಯ ನಡುವೆ ನಡೆದ ಈ ಸಭೆಯಲ್ಲಿ ಆರ್ಥಿಕ ಭದ್ರತೆ, ನಿರ್ಣಾಯಕ ಖನಿಜಗಳ (Critical Minerals) ಪೂರೈಕೆ ಸರಪಳಿ, ಕೃತಕ ಬುದ್ಧಿಮತ್ತೆ (AI), ಸಮುದ್ರದಡಿಯ ಕೇಬಲ್ಗಳು, ವಾಣಿಜ್ಯ ಹಡಗು ಸಂಚಾರದ ಸುರಕ್ಷತೆ ಹಾಗೂ ಮಧ್ಯಪ್ರಾಚ್ಯದ ಬೆಳವಣಿಗೆಗಳ ಕುರಿತು ಗಂಭೀರ ಚರ್ಚೆ ನಡೆಯಿತು.
ಮತ್ತೊಂದೆಡೆ, ಡೊನಾಲ್ಡ್ ಟ್ರಂಪ್ ಅವರ ಮನಿಲಾ ಭೇಟಿಯನ್ನು ವಿರೋಧಿಸಿ ಪ್ರತಿಭಟನಾಕಾರರು ಸತತ ಐದನೇ ದಿನವೂ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಅಮೆರಿಕದ ಪಾತ್ರವನ್ನು ವಿರೋಧಿಸಿ ಟ್ರಂಪ್ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು, ತಕ್ಷಣವೇ ಯುದ್ಧ ನಿಲ್ಲಿಸಬೇಕು ಮತ್ತು ಅಮೆರಿಕ ನೇತೃತ್ವದ ಪೂರೈಕೆ ಸರಪಳಿ ಉಪಕ್ರಮವಾದ ‘ಪ್ಯಾಕ್ಸ್ ಸಿಲಿಕಾ’ (Pax Silica) ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

