ರೇಣುಕಾಸ್ವಾಮಿ ಕೊಲೆ ಪ್ರಕರಣ: ಇವಳು ಯಾರು ಗೊತ್ತಾಯ್ತಾ? ಇವಳು ನನ್ನ ಹೆಂಡತಿ; ಮಾಫಿ ಸಾಕ್ಷಿ ಪ್ರದೋಶ್‌ ಬಿಚ್ಚಿಟ್ಟ ಸತ್ಯ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಶ್, ನ್ಯಾಯಾಲಯ ಹಾಗೂ ತನಿಖಾಧಿಕಾರಿಗಳ ಎದುರು ಮೊದಲ ದಿನದ ವಿಚಾರಣೆಯಲ್ಲಿ ಆಘಾತಕಾರಿ ಸತ್ಯಗಳನ್ನು ಹೊರಹಾಕಿದ್ದಾರೆ. ಸತತ 3 ಗಂಟೆಗಳ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ, ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಕೊಲೆ ಕೃತ್ಯದ ಭೀಕರ ಘಟನಾವಳಿಗಳನ್ನು ಪ್ರದೋಶ್ ವಿವರವಾಗಿ ಬಿಚ್ಚಿಟ್ಟಿದ್ದಾರೆ.

ವಿಚಾರಣೆ ವೇಳೆ ಪ್ರದೋಶ್ ಬಿಚ್ಚಿಟ್ಟ ಪ್ರಮುಖ ಅಂಶಗಳು:

ಶೆಡ್‌ನಲ್ಲಿ ನಡೆದ ಘಟನೆ: ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದದ್ದು ಯಾರು ಮತ್ತು ಅಲ್ಲಿ ಯಾರ್ಯಾರು ಹಲ್ಲೆ ನಡೆಸಿದರು ಎಂಬುದನ್ನು ಪ್ರದೋಶ್ ಸ್ಪಷ್ಟವಾಗಿ ವಿವರಿಸಿದ್ದಾರೆ.

ದರ್ಶನ್ ಆಕ್ರೋಶ ಮತ್ತು ಹಲ್ಲೆ: ವಿಷಯ ತಿಳಿದು ತೀವ್ರ ಕೋಪದಿಂದ ಶೆಡ್‌ಗೆ ಆಗಮಿಸಿದ ನಟ ದರ್ಶನ್, ರೇಣುಕಾಸ್ವಾಮಿಯನ್ನು ಕ್ರೂರವಾಗಿ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ವೇಳೆ ರೇಣುಕಾಸ್ವಾಮಿ ಕೈ ಮುಗಿದು ಕ್ಷಮೆಗಾಗಿ ಗಿಂಜಾಡಿದರೂ ದರ್ಶನ್ ಬಿಡಲಿಲ್ಲ.

“ಇವಳು ನನ್ನ ಹೆಂಡತಿ”: ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆಯೂ ಪ್ರದೋಶ್ ಮಾಹಿತಿ ಹಂಚಿಕೊಂಡಿದ್ದಾರೆ. ಪವಿತ್ರಾ ಗೌಡ ಭುಜದ ಮೇಲೆ ಕೈಹಾಕಿದ ದರ್ಶನ್, “ಇವಳು ಯಾರು ಗೊತ್ತಾಯ್ತಾ? ಇವಳು ನನ್ನ ಹೆಂಡತಿ! ನನ್ನ ಹೆಂಡತಿಗೆ ಮೆಸೇಜ್ ಮಾಡುವಷ್ಟು ಧೈರ್ಯ ನಿನಗಿದೆಯಾ?” ಎಂದು ರೇಣುಕಾಸ್ವಾಮಿಯನ್ನು ಪ್ರಶ್ನಿಸಿ ಅಬ್ಬರಿಸಿದ್ದರು.

ಮರ್ಮಾಂಗಕ್ಕೆ ಒದ್ದ ದರ್ಶನ್: ಆಕ್ರೋಶದ ಕಟ್ಟೆಯೊಡೆದ ಕ್ಷಣದಲ್ಲಿ ನಟ ದರ್ಶನ್, ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಗಿ ಪ್ರದೋಶ್ ವಿಚಾರಣೆ ವೇಳೆ ಭೀಕರ ದೃಶ್ಯವನ್ನು ವಿವರವಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *