ಪುತ್ತೂರು: ಪುತ್ತೂರು ನಿವಾಸಿ, ಎಸ್.ಆರ್. ನಾಯಕ್ ಎಂದೇ ಖ್ಯಾತರಾಗಿದ್ದ ಸುಳ್ಳಿ ದಾಸನ ಕಜೆ ರಾಧಾಕೃಷ್ಣ ನಾಯಕ್ (78) ಅವರು ನ.17ರಂದು ಮಧ್ಯಾಹ್ನ ದೈವಾಧೀನರಾದರು.
ಕಾರ್ಪೊರೇಷನ್ ಬ್ಯಾಂಕಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಇವರು, ನಂತರ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಇದರ ಜೊತೆಗೆ ಪುತ್ತೂರು ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿಯ ನಿರ್ದೇಶಕ, ಪುತ್ತೂರು ಬಾಲವಾಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ನಿರ್ದೇಶಕ, ಸಾರಸ್ವತ ಸೌರಭ ತ್ರೈಮಾಸಿಕ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ, ಪುತ್ತೂರು ಬಾಲವಾಲಿಕಾರ್ ಹಿತವರ್ಧಕ ಮಂಡಲ ಹೀಗೆ ಹಲವು ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸೇವೆಗೆ 25 ವರುಷಗಳ ಸಂಭ್ರಮ: ನ.22ರಂದು ಸುಳ್ಯದಲ್ಲಿ ರಜತ ಸಂಭ್ರಮ

ಸದಾ ಕ್ರಿಯಾಶೀಲರಾಗಿದ್ದ, ಅಪಾರ ಜ್ಞಾನಾನುಭವ ಹೊಂದಿದ್ದ ಮಾರ್ಗದರ್ಶಕ ವ್ಯಕ್ತಿತ್ವದವರಾಗಿದ್ದರು. ಸಂಘದ ಬೆಳವಣಿಗೆಯಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ದೂರದರ್ಶಿ ನಾಯಕರಾಗಿ, ಮಾರ್ಗದರ್ಶಕರಾಗಿ ಹಾಗೂ ಸ್ಫೂರ್ತಿಯಾಗಿ ಅವರು ಸಂಘದ ಸಿಬ್ಬಂದಿ ವರ್ಗಕ್ಕೆ ಹಾಗೂ ಸದಸ್ಯರಿಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದರು.
ಅವರ ಕ್ರಿಯಾಶೀಲತೆ ಮತ್ತು ಅಪಾರ ಅನುಭವದಿಂದಾಗಿ ಸಂಘವು ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ. ಅವರ ಅಗಲಿಕೆಯಿಂದ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂಘದ ಆಡಳಿತ ಮಂಡಳಿಯು ತನ್ನ ಸಂತಾಪವನ್ನು ಸೂಚಿಸಿದೆ.

ಇವರು ಧರ್ಮಪತ್ನಿ ಸುಮನಾ ನಾಯಕ್ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂಘದ ನಿರ್ದೇಶಕರ ಮಂಡಳಿ ಪ್ರಾರ್ಥಿಸಿದೆ.

