ಕನ್ಯಾಕುಮಾರಿ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ‘ಲೈಕ್ಸ್’ ಗಳಿಸುವುದಕ್ಕಾಗಿ ಹಣದ ಕಟ್ಟುಗಳನ್ನು ಪ್ರದರ್ಶಿಸಿದ ಯೂಟ್ಯೂಬರ್ ದಂಪತಿಗೆ ಖದೀಮರು ಭಾರೀ ಶಾಕ್ ನೀಡಿದ್ದಾರೆ. ಯೂಟ್ಯೂಬ್ ವಿಡಿಯೋ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಹಾಸಿಗೆಯ ಮೇಲೆ ಕಂತೆ ಕಂತೆ ಹಣದ ನೋಟುಗಳನ್ನು ಇಟ್ಟು ಪ್ರದರ್ಶಿಸಿದ್ದನ್ನು ಗಮನಿಸಿದ ಕಳ್ಳರ ಗ್ಯಾಂಗ್, ಮನೆಗೆ ಕನ್ನ ಹಾಕಿ 1 ಕೋಟಿ ರೂ. ನಗದು ಹಾಗೂ 1 ಕೆಜಿ ಚಿನ್ನಾಭರಣಗಳನ್ನು ದೋಚಿರುವ ಭೀಕರ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋವಿಲ್ ಸಮೀಪದ ತಮಟ್ಟುಕೋಣಂ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ವಿನೋದ್ ಕುಮಾರ್ ಮತ್ತು ಅವರ ಪತ್ನಿ ಮಧುಮಿತಾ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಯೂಟ್ಯೂಬರ್ ಜೋಡಿ. ಪತ್ನಿ ಮಧುಮಿತಾ ಅವರು ತಮ್ಮ ಗಂಡನ ಜೊತೆಗೂಡಿ ಯೂಟ್ಯೂಬ್ ವೀಡಿಯೊಗಳು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗಳನ್ನು ಅಪ್‌ಲೋಡ್ ಮಾಡುತ್ತಿದ್ದರು.
ಇಲ್ಲಿದೆ ನೋಡಿ ವಿಡಿಯೋ:
డబ్బుల వీడియో పోస్ట్.. యూట్యూబర్ ఇంట్లో రూ.1 కోటి చోరీ
కన్యాకుమారి జిల్లా నాగర్కోవిల్ సమీపంలోని తమ్మట్టుకోణం ప్రాంతంలో ఘటన
స్థానికంగా నివాసం ఉంటే వినోద్ కుమార్ ఓ ప్రముఖ యూట్యూబర్
భార్య మధుమిత తన భర్తతో కలిసి యూట్యూబ్ వీడియోలు, ఇన్స్టాగ్రామ్ రీల్స్ పోస్ట్ చేస్తూ ఉంటుంది
— PulseNewsBreaking (@pulsenewsbreak) September 25, 2026
ಇತ್ತೀಚೆಗೆ ಮಧುಮಿತಾ ಅವರು ತಮ್ಮ ಮನೆಯ ಹಾಸಿಗೆಯ ಮೇಲೆ ಲಕ್ಷಾಂತರ ರೂಪಾಯಿ ಹಣದ ಕಟ್ಟುಗಳನ್ನು (Cash Bundles) ಜೋಡಿಸಿಟ್ಟು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ, ದುರಾದೃಷ್ಟವಶಾತ್ ಈ ವಿಡಿಯೋ ಕಳ್ಳರ ಗ್ಯಾಂಗ್‌ನ ಕಣ್ಣಿಗೆ ಬಿದ್ದಿದ್ದು, ದಂಪತಿಯ ಮನೆಯನ್ನೇ ಟಾರ್ಗೆಟ್ ಮಾಡಿ ಕಳವಿಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದರು.
ವಿನೋದ್ ಕುಮಾರ್ ಮತ್ತು ಮಧುಮಿತಾ ಅವರು ಮನೆಗೆ ಬೀಗ ಹಾಕಿ ಶಾಪಿಂಗ್‌ಗಾಗಿ ಹೊರಗೆ ತೆರಳಿದ್ದ ಸಮಯವನ್ನೇ ಕಾಯುತ್ತಿದ್ದ ಖದೀಮರು, ಮನೆಯ ಹಿಂಬಾಗಿಲಿನ ಮೂಲಕ ಸೈಲೆಂಟ್ ಆಗಿ ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ₹1 ಕೋಟಿ ನಗದು ಹಣ ಹಾಗೂ 1 ಕೆಜಿ ತೂಕದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಶಾಪಿಂಗ್ ಮುಗಿಸಿ ಮನೆಗೆ ಹಿಂತಿರುಗಿದ ದಂಪತಿಗೆ ಹಿಂಬಾಗಿಲು ಮುರಿದಿರುವುದು ಹಾಗೂ ಮನೆಯಲ್ಲಿದ್ದ ಕೋಟ್ಯಂತರ ಮೌಲ್ಯದ ನಗದು-ಚಿನ್ನ ಕಳವಾಗಿರುವುದು ಕಂಡು ತೀವ್ರ ಆಘಾತವಾಗಿದೆ. ತಕ್ಷಣವೇ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವೈನ್ ಶಾಪ್ ಹೊಕ್ಕು ಮದ್ಯ ಸೇವಿಸಿ ಮಲಗಿದ ಕೋತಿ
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳವು ನಡೆದ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಗುರುತು ಪತ್ತೆಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಹಣ ಮತ್ತು ಆಭರಣ ಪ್ರದರ್ಶಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

