ಆಶಾ ಕಾರ್ಯಕರ್ತೆಯರ ಸೇವೆಯ ಅಗತ್ಯವನ್ನೇ ಪ್ರಶ್ನಿಸುವ ಧಾಟಿಯ ಹೇಳಿಕೆ ಎಷ್ಟು ಸರಿ? ಜನಪ್ರತಿನಿಧಿಗಳಿಲ್ಲದಿದ್ದರೂ ಸ್ಥಳೀಯ ಸಂಸ್ಥೆಗಳು ನಡೆಯುತ್ತಿವೆ ಎಂದಾದರೆ ಚುನಾವಣೆಗಳ ಅವಶ್ಯಕತೆ ಏನು ಎನ್ನು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಿದ್ದಾಗ ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ. ಆಶಾಗಳು ಇಲ್ಲ ಎಂದರೆ ನಮ್ಮಲ್ಲಿ ವೈದ್ಯರು, ನರ್ಸ್‌ಗಳು ಇಲ್ಲವೇ? ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರ ಮತ್ತು ತಮ್ಮ ಮೇಲೆ ಆಶಾ ಕಾರ್ಯಕರ್ತೆಯರು ವಿಶ್ವಾಸ ಇಟ್ಟಿಲ್ಲ. ನಮ್ಮ ಮೇಲೆ ಅವರು ವಿಶ್ವಾಸ ಇಡದ ಮೇಲೆ ನಾವು ಯಾಕೆ ಅವರ ಮೇಲೆ ವಿಶ್ವಾಸ ಇಡಬೇಕು? ವೈಯಕ್ತಿಕವಾಗಿ ಆರೋಗ್ಯ ಸಚಿವನಾಗಿ ನನಗೆ ಬಹಳ ಬೇಸರವಾಗಿದೆ ಎಂಬ ಸಚಿವರ ಮಾತುಗಳು ಆಶಾ ಕಾರ್ಯಕರ್ತೆಯರ ಸೇವೆ ಮತ್ತು ಅವರ ಹೋರಾಟದ ಬಗ್ಗೆ ಸರ್ಕಾರದ ನಿಲುವು ಎಂತಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಆದರೆ ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ ಎನ್ನುವುದಾದರೆ, ಆರೋಗ್ಯ ಸಚಿವರು ಇದ್ದರೂ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ ಎನ್ನಲು ಸಾಧ್ಯವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಸಚಿವರ ಜವಾಬ್ದಾರಿ ಕೇವಲ ವೈದ್ಯರು ಮತ್ತು ನರ್ಸ್‌ಗಳಿರುವುದನ್ನು ನೆನಪಿಸುವುದಷ್ಟೇ ಅಲ್ಲ. ಇಲಾಖೆಯ ಪ್ರತಿಯೊಂದು ಹಂತದಲ್ಲೂ ಕೆಲಸ ಮಾಡುವ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸುವುದು, ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಮತ್ತು ಆರೋಗ್ಯ ಸೇವೆ ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಕೂಡ ಸಚಿವರ ಜವಾಬ್ದಾರಿಯಾಗಿದೆ ಎಂದು ಜನಸಾಮಾನ್ಯರ ಅಭಿಪ್ರಾಯವಾಗಿದೆ.
ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಮನೆಮನೆಗೆ ತೆರಳಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಜನಸಾಮಾನ್ಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಆರೋಗ್ಯ ಇಲಾಖೆಯ ಯೋಜನೆಗಳು ಜನರಿಗೆ ತಲುಪುವಲ್ಲಿ ಅವರ ಪಾತ್ರವೂ ಮಹತ್ವದ್ದಾಗಿದೆ. ವೈದ್ಯರು ಮತ್ತು ನರ್ಸ್‌ಗಳಿದ್ದಾರೆ ಎಂಬ ಕಾರಣಕ್ಕೆ ಆಶಾ ಕಾರ್ಯಕರ್ತೆಯರ ಸೇವೆಯನ್ನು ಕಡೆಗಣಿಸಲು ಸಾಧ್ಯವೇ? ಎಂದು ಪ್ರಶ್ನಿಸತೊಡಗಿದ್ದಾರೆ.

ಇನ್ನೊಂದು ಪ್ರಶ್ನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಚಾರದಲ್ಲೂ ಇದೆ. ಮಹಿಳಾ ಅಭಿವೃದ್ಧಿ ಇಲಾಖೆಗೆ ಪೂರ್ಣ ಪ್ರಮಾಣದ ಸಚಿವರೇ ಇಲ್ಲದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಾಗುತ್ತಿದೆ. ಹಾಗಾದರೆ ಆ ಇಲಾಖೆಗೆ ಸಚಿವರೇ ಇಲ್ಲದಿದ್ದರೂ ನಡೆಯುತ್ತದೆ ಎಂದು ಹೇಳಿದರೆ ತಪ್ಪಾಗುತ್ತದೆಯೇ? ಸಚಿವ ಸ್ಥಾನ ಇದ್ದರೂ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ ಎಂದು ಜನರು ಪ್ರಶ್ನಿಸಿದರೆ ಅದಕ್ಕೆ ಉತ್ತರವೇನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಇದೇ ತರ್ಕವನ್ನು ಸ್ಥಳೀಯ ಸ್ವರಾಜ್ಯ ಸಂಸ್ಥೆಗಳಿಗೂ ಅನ್ವಯಿಸಬಹುದು. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಸೇವೆ ನಡೆಯುತ್ತದೆ ಎನ್ನುವುದಾದರೆ, ಜನಪ್ರತಿನಿಧಿಗಳಿಲ್ಲದಿದ್ದರೂ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಅಧಿಕಾರಿಗಳ ಮೂಲಕ ಕೆಲಸ ಕಾರ್ಯಗಳು ನಡೆಯುತ್ತಿವೆಯಲ್ಲವೇ? ಹಾಗಾದರೆ ಈ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಅವಶ್ಯಕತೆ ಏನು? ಜನಪ್ರತಿನಿಧಿಗಳ ಅಗತ್ಯವೇ ಇಲ್ಲವೇ? ಎಂಬುದು ಜನರ ಪ್ರಶ್ನೆ.
ಸರ್ಕಾರಿ ವ್ಯವಸ್ಥೆಯಲ್ಲಿ ಪ್ರತಿಯೊಂದು ಹಂತದ ಜವಾಬ್ದಾರಿಗೂ ತನ್ನದೇ ಆದ ಮಹತ್ವವಿದೆ. ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯ.
ಆಶಾ ಕಾರ್ಯಕರ್ತೆಯರು ಸರ್ಕಾರದ ಮೇಲೆ ವಿಶ್ವಾಸ ಇಟ್ಟಿಲ್ಲ ಎಂಬ ಬೇಸರ ಸಚಿವರಿಗಿರಬಹುದು. ಆದರೆ ಆ ವಿಶ್ವಾಸವನ್ನು ಮರಳಿ ಗಳಿಸಬೇಕಾದ ಜವಾಬ್ದಾರಿಯೂ ಸರ್ಕಾರದ್ದೇ ಆಗಿದೆ. ಅವರ ಬೇಡಿಕೆಗಳು, ಸಮಸ್ಯೆಗಳು ಮತ್ತು ಹೋರಾಟದ ಹಿಂದಿನ ಕಾರಣಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಕರ್ತವ್ಯವೂ ಆಗಿದೆ.
ಒಂದು ವರ್ಗದ ಸೇವೆ ಇಲ್ಲದಿದ್ದರೂ ನಡೆಯುತ್ತದೆ ಎಂದು ಹೇಳುವುದು ಸುಲಭ. ಆದರೆ ಆ ವರ್ಗದ ಸೇವೆಯ ಮಹತ್ವವನ್ನು ಅರ್ಥಮಾಡಿಕೊಂಡು ಗೌರವಿಸುವುದೇ ನಿಜವಾದ ಆಡಳಿತದ ಲಕ್ಷಣವೂ ಆಗಿದೆ.
ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ ಎಂಬ ಹೇಳಿಕೆಗಿಂತ, ಅವರ ಸೇವೆ ಅನಿವಾರ್ಯವಾಗದಂತೆ ಅಲ್ಲ, ಅವರ ಸೇವೆಗೆ ನ್ಯಾಯಯುತ ಗೌರವ ಮತ್ತು ಸೌಲಭ್ಯಗಳನ್ನು ಒದಗಿಸುವುದು ಹೇಗೆ ಎಂಬ ಚರ್ಚೆ ಸರ್ಕಾರದಿಂದ ನಡೆಯಬೇಕಿದೆ.

