ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಹೊಸದಾಗಿ ಮನೆ ಕಟ್ಟಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ (Permanent Power Connection) ಕಾಯುತ್ತಿರುವ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೊಸ ವಸತಿ ಹಾಗೂ ಕೃಷಿ ಕಟ್ಟಡಗಳಿಗೆ ಶಾಶ್ವತ ಇಂಧನ ಸಂಪರ್ಕ ಪಡೆಯಲು ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಸಲ್ಲಿಸುವುದರಿಂದ ಕೇವಲ ಒಂದು ಬಾರಿಗೆ ಅನ್ವಯವಾಗುವಂತೆ (One-time Exemption) ಇಂಧನ ಇಲಾಖೆ ಅಧಿಕೃತ ವಿನಾಯಿತಿ ಆದೇಶ ಹೊರಡಿಸಿದೆ.
ಆದರೆ ಈ ಸೌಲಭ್ಯ ಪಡೆಯಲು ನಾಗರಿಕರು ಇಂದಿನಿಂದ ಮುಂದಿನ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಇಂಧನ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಈ ವಿನಾಯಿತಿಯು ಮೇ 31ರ ಮೊದಲು ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಕಟ್ಟಡಗಳಿಗೆ ಮಾತ್ರ ಅನ್ವಯವಾಗಲಿದೆ. 2,400 ಚದರ ಅಡಿ ಅಥವಾ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಪ್ಲಾಟ್‌ನಲ್ಲಿ ನಿರ್ಮಿಸಲಾದ ವಸತಿ ಮನೆಗಳಿಗೆ ಮಾತ್ರ ಈ ಒಸಿ ವಿನಾಯಿತಿ ಸಿಗಲಿದೆ.

ಈಗಾಗಲೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿದ್ದು, ಕಟ್ಟಡ ಪೂರ್ಣಗೊಂಡಿದ್ದರೂ ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸದವರು ಮುಂದಿನ 15 ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು. ತಾತ್ಕಾಲಿಕ ಮತ್ತು ಶಾಶ್ವತ ಸಂಪರ್ಕದ ಅರ್ಜಿಗಳಲ್ಲಿ ಮಾಲೀಕರ ಹೆಸರು ಒಂದೇ ಆಗಿರಬೇಕು. ಮೇ 31ರ ಮೊದಲು ಕಾಮಗಾರಿ ಮುಗಿದು, ಯಾವುದೇ ವಿದ್ಯುತ್ ಸಂಪರ್ಕ ಇಲ್ಲದ ಕಟ್ಟಡಗಳ ಮಾಲೀಕರು ತಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ (ESCOMs) ಉಪವಿಭಾಗ ಕಚೇರಿಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಕೆಯಾದ ತಕ್ಷಣ ಎಸ್ಕಾಂ ಅಧಿಕಾರಿಗಳು ಗ್ರಾಹಕರ ಸಮ್ಮುಖದಲ್ಲೇ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಕಟ್ಟಡ ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ದಿನಾಂಕ, ಸಮಯ ಮತ್ತು ನಿಖರ ಸ್ಥಳದ ಸಮನ್ವಯತೆ ಹೊಂದಿರುವ ಜಿಯೋ-ಟ್ಯಾಗ್ ಮಾಡಿದ ಫೋಟೋಗಳನ್ನು ತೆಗೆದು ಸಿಸಿಬಿ (CCB) ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಆದೇಶದಂತೆ ಯಾವುದೇ ಅರ್ಜಿಯನ್ನು ಅಧಿಕಾರಿಗಳು 15 ದಿನಗಳಿಗಿಂತ ಹೆಚ್ಚು ಕಾಲ ಬಾಕಿ ಇಟ್ಟುಕೊಳ್ಳುವಂತಿಲ್ಲ.
ಇದನ್ನೂ ಓದಿ: ಟ್ರಾಫಿಕ್ ಫೈನ್ ಶೇ.50 ಡಿಸ್ಕೌಂಟ್ ಧಮಾಕಾ!: ಒಂದೇ ಬಾರಿಗೆ 100 ಕೇಸ್‌ಗಳ ದಂಡ ಕಟ್ಟಿ ರೆಕಾರ್ಡ್ ಬರೆದ ಬೆಂಗಳೂರಿಗ
ಈ ವಿಶೇಷ ವಿನಾಯಿತಿಯು ಕೇವಲ ನಗರ ಮತ್ತು ಗ್ರಾಮೀಣ ಭಾಗದ ವಸತಿ ಕಟ್ಟಡಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ರೈತರ ಫಾರ್ಮ್‌ಹೌಸ್‌ಗಳು, ಗ್ರಾಮೀಣ ಮನೆಗಳು, ಕೃಷಿ ಉಪಕರಣಗಳನ್ನು ಇಡುವ ಶೆಡ್‌ಗಳು, ಹಸುವಿನ ಕೊಟ್ಟಿಗೆಗಳು ಮತ್ತು ರೇಷ್ಮೆ ಹುಳು ಸಾಕಾಣಿಕೆ ಮನೆಗಳಿಗೂ ಅನ್ವಯಿಸಲಿದೆ. ವಿಶೇಷವೆಂದರೆ, ಕೃಷಿ ಮತ್ತು ಗ್ರಾಮೀಣ ಕಟ್ಟಡಗಳಿಗೆ ಯಾವುದೇ ಪ್ಲಾಟ್ ಅಥವಾ ಕಟ್ಟಡದ ಗಾತ್ರದ ಮಿತಿ ಇರುವುದಿಲ್ಲ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

