ಬ್ಯಾಲೆಟ್ ಪೇಪರ್​​​ನಲ್ಲೇ ಚುನಾವಣೆಯನ್ನು ನಡೆಸಿ ಎಂದು ಹಠ ಹಿಡಿದ ಕಾಂಗ್ರೆಸ್​​ಗೆ ಹೀನಾಯ ಸೋಲು: ಸೋಲಿಗೆ ಮೂರು ಕಾರಣ

ಬೆಂಗಳೂರು: ಬ್ಯಾಲೆಟ್ ಪೇಪರ್​​​ನಲ್ಲೇ ಚುನಾವಣೆಯನ್ನು ನಡೆಸಿ ಎಂದು ಹಠ ಹಿಡಿದು ಚುನಾವಣೆ ಎದುರಿಸಿದ ಕಾಂಗ್ರೆಸ್​​​​​​ಗೆ ಹೀನಾಯ ಸೋಲು ಕಂಡಿದೆ. ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಭಾರಿ ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲಿ ಸತತ 5 ಬಾರಿ ವಿಜೇತರಾಗಿದ್ದ ಪ್ರಭಾವಿ ನಾಯಕರನ್ನೇ ಮಣಿಸುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಕೂಟ (NDA) ಅಭೂತಪೂರ್ವ ಗೆಲುವು ಸಾಧಿಸಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತ ವೈಖರಿಯ ನಡುವೆಯೂ ಶಿಕ್ಷಕ ಮತದಾರರು ಮೈತ್ರಿಕೂಟದ ಕೈ ಹಿಡಿದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಕ್ಷೇತ್ರವಾರು ಫಲಿತಾಂಶ :

ಬೆಂಗಳೂರು ಶಿಕ್ಷಕರ ಕ್ಷೇತ್ರ (NDA ಗೆಲುವು):

ಭಾರಿ ಹಣಾಹಣಿಗೆ ಸಾಕ್ಷಿಯಾಗಿದ್ದ ಈ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್‌ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಹಿಂದೆ ಸತತ 5 ಬಾರಿ ಗೆದ್ದು ಬೀಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಪುಟ್ಟಣ್ಣ ಅವರಿಗೆ ಸೋಲುಣಿಸುವ ಮೂಲಕ ರಂಗನಾಥ್ ಮೇಲ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರ (NDA ಗೆಲುವು):

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ (ಬಿಜೆಪಿ) ಅಭ್ಯರ್ಥಿ ಶಶೀಲ್ ನಮೋಶಿ ಅವರು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್‌ ಅವರನ್ನು ಬೃಹತ್ ಮತಗಳ ಅಂತರದಿಂದ ಸೋಲಿಸಿ ಮತ್ತೊಮ್ಮೆ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ನಮೋಶಿ ಜಯಭೇರಿ ಬಾರಿಸಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರ (NDA ಗೆಲುವು):

ಬಿಜೆಪಿ ಅಭ್ಯರ್ಥಿ ಸಂಕನೂರ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರ (NDA ಗೆಲುವು):

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರಿಗೆ ಹಿನ್ನಡೆ ಆಗಿದೆ.

ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎಗೆ ಐತಿಹಾಸಿಕ ಗೆಲುವು: ಸತತ 5 ಬಾರಿಯ ವಿಜೇತ ಪುಟ್ಟಣ್ಣಗೆ ಸೋಲು ಉಣಿಸಿ ಎ.ಪಿ. ರಂಗನಾಥ್‌ ವಿಜಯಪತಾಕೆ

ಬ್ಯಾಲೆಟ್ ಸಮರದಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣಗಳೇನು?

ಶಿಕ್ಷಕರ ಸಮುದಾಯದ ಅಸಮಾಧಾನ: ಶೈಕ್ಷಣಿಕ ವಲಯದಲ್ಲಿ ಎದುರಾಗಿರುವ ಸಮಸ್ಯೆಗಳು, ಅನುದಾನ ರಹಿತ ಶಾಲೆಗಳ ಬೇಡಿಕೆ ಹಾಗೂ ಶಿಕ್ಷಕರ ವೇತನಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿಳಂಬ ನೀತಿಯ ವಿರುದ್ಧ ಶಿಕ್ಷಕ ಮತದಾರರು ಬ್ಯಾಲೆಟ್ ಪೇಪರ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.

ಬಿಜೆಪಿ-ಜೆಡಿಎಸ್ ಒಗ್ಗಟ್ಟು: ಎನ್‌ಡಿಎ ಮೈತ್ರಿಕೂಟವು ಒಗ್ಗಟ್ಟಿನಿಂದ ಮತಗಳನ್ನು ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕನ್ನ ಹಾಕಿದೆ.

ಸ್ಥಳೀಯ ನಾಯಕರ ವೈಫಲ್ಯ: ಆಡಳಿತ ಪಕ್ಷದಲ್ಲಿದ್ದರೂ ಶಿಕ್ಷಕ ಮತದಾರರ ವಿಶ್ವಾಸ ಗಳಿಸುವಲ್ಲಿ ಮತ್ತು ಮತಗಟ್ಟೆಗೆ ಕರೆತರುವಲ್ಲಿ ಕಾಂಗ್ರೆಸ್ ಸ್ಥಳೀಯ ನಾಯಕರು ವಿಫಲರಾಗಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ