ಭೋಪಾಲ್: ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ಸುಮಾರು 90 ವರ್ಷದ ವೃದ್ಧೆಯ ಮೇಲೆ ನಾಲ್ವರು ಮುಸುಕುಧಾರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ವೃದ್ಧೆ ತನ್ನ ಗ್ರಾಮದಲ್ಲಿರುವ ಕೃಷಿ ಹೊಲದ ಹತ್ತಿರದ ಗುಡಿಸಲಿನಲ್ಲಿ ಒಬ್ಬಳೇ ಇದ್ದಾಗ ಗುರುವಾರ ರಾತ್ರಿ ಈ ದುಷ್ಕೃತ್ಯ ನಡೆದಿರುವುದು ತಿಳಿದುಬಂದಿದೆ. ಸದ್ಯ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಮೂರು ವರ್ಷದ ಮಗುವಿನ ಮೇಲೆ ಶಿಕ್ಷಕಿ ಆಸಿಡ್ ದಾಳಿ ಆರೋಪ
ಘಟನೆ ಬಳಿಕ ವೃದ್ಧೆ ತನ್ನ ಮಗಳಿಗೆ ವಿಷಯ ತಿಳಿಸಿದ್ದು, ಆಕೆ ಮುಂದಿನ ದಿನ ಬೆಳಗ್ಗೆ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಸಲಹೆ ಮೇರೆಗೆ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 70 ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಖಂಡ್ವಾ ಜಿಲ್ಲಾ ಪೊಲೀಸ್ ಅಧೀಕ್ಷಕ ಮನೋಜ್ ರೈ ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದ್ದು, ಮೂರು ವಿಶೇಷ ತಂಡಗಳನ್ನು ಹುಡುಕಾಟಕ್ಕೆ ನಿಯೋಜಿಸಲಾಗಿದೆ. ಆರೋಪಿಗಳ ಪತ್ತೆಗೆ ಮಾಹಿತಿ ನೀಡುವವರಿಗೆ 10,000 ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

