ರಾತ್ರಿ ಊಟ ಮುಗಿಸಿದ ನಂತರ ಮಾವಿನಹಣ್ಣು ಸೇವಿಸಿ ಅಸ್ವಸ್ಥಗೊಂಡಿದ್ದ ಕುಟುಂಬ: ಇಬ್ಬರು ಬಾಲಕಿಯರು ಬಲಿ

ಬೀದರ್: ಊಟದ ಬಳಿಕ ಸವಿದ ಮಾವಿನಹಣ್ಣು ಒಂದೇ ಕುಟುಂಬದ ಇಬ್ಬರು ಹೆಣ್ಣುಮಕ್ಕಳ ಪಾಲಿಗೆ ಯಮನಾಗಿ ಪರಿಣಮಿಸಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾವಿನಹಣ್ಣು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬೀದರ್ ಮೂಲದ ಇಬ್ಬರು ಸಹೋದರಿಯರು ಚಿಕಿತ್ಸೆ ಫಲಿಸದೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ನಿವಾಸಿಗಳಾದ ಭವಾನಿ ವೈಜಿನಾಥ ಮೇತ್ರೆ (17) ಮತ್ತು ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ದುರ್ದೈವಿ ಬಾಲಕಿಯರು ಎಂದು ಗುರುತಿಸಲಾಗಿದೆ.

ಮೂರು ದಿನಗಳ ಹಿಂದೆ ಮನೆಯಲ್ಲಿ ರಾತ್ರಿ ಊಟ ಮುಗಿಸಿದ ನಂತರ ತಾಯಿ ಇಂದುಮತಿ ಹಾಗೂ ಅವರ ಐವರು ಹೆಣ್ಣುಮಕ್ಕಳು ಒಟ್ಟಿಗೆ ಸೇರಿ ಮಾವಿನಹಣ್ಣು ತಿಂದಿದ್ದಾರೆ. ಮಾವು ಸೇವಿಸಿದ ಕೆಲವೇ ಸಮಯದ ಬಳಿಕ ಎಲ್ಲರಿಗೂ ತೀವ್ರವಾಗಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಆರೋಗ್ಯದಲ್ಲಿ ಗಂಭೀರ ಏರುಪೇರಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ಇಡೀ ಕುಟುಂಬವನ್ನು ತಕ್ಷಣವೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ದುರಾದೃಷ್ಟವಶಾತ್ ಭವಾನಿ ಮೇತ್ರೆ ಮತ್ತು ಸಂಧ್ಯಾರಾಣಿ ಮೇತ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಿರಿಯ ಸಹೋದರಿ ವಿಜಯಶ್ರೀ (19) ಎಂಬಾಕೆಗೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ತಾಯಿ ಇಂದುಮತಿ ಹಾಗೂ ವಿಜಯಶ್ರೀ ಇಬ್ಬರೂ ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ನೀಟ್ ಯುಜಿ ಮರು ಪರೀಕ್ಷಾ ದಿನಾಂಕ ಪ್ರಕಟ: ಎನ್‌ಟಿಎಯಿಂದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್; ಈ ಬಾರಿ ಸಿಗಲಿದೆ ಹೆಚ್ಚುವರಿ 15 ನಿಮಿಷ ಕಾಲಾವಕಾಶ! 

ಮಾವು ತಿಂದ ಬಳಿಕವೇ ಈ ದುರಂತ ಸಂಭವಿಸಿರುವುದರಿಂದ ತೀವ್ರ ಫುಡ್ ಪಾಯಿಸನ್ (ಆಹಾರ ವಿಷಪೂರಿತ) ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಬಾಲಕಿಯರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೋಸ್ಟ್‌ಮಾರ್ಟಮ್ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣವೇನು ಎಂಬ ಅಸಲಿ ಸತ್ಯಾಂಶ ಹೊರಬರಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್‌ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು