ಬಂಟ್ವಾಳ: ಶಾಲೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು ಮತ್ತು ಮಕ್ಕಳು ಸಂಭ್ರಮದಿಂದ ಕಲಿಕೆಯಲ್ಲಿ ತೊಡಗಬೇಕೆನ್ನುವ ಮಹತ್ವಾಕಾಂಕ್ಷೆಯೊಂದಿಗೆ, ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ‘ಮಳೆ ಹಬ್ಬ’ ಎನ್ನುವ ವಿಶಿಷ್ಟ ಕಲಿಕಾ ಚೈತನ್ಯ ಶಿಬಿರವನ್ನು ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಬೇಸಿಗೆ ರಜೆಯ ಮಜಾವನ್ನು ಕಳೆದು ಶಾಲೆಗೆ ಮರಳುವ ಮಕ್ಕಳು ಆತಂಕವಿಲ್ಲದೆ, ಇಷ್ಟಪಟ್ಟು ಸಂತಸದ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಲಾ ಹಿರಿಯ ವಿದ್ಯಾರ್ಥಿ ವೀಣಾ ಸರಸ್ವತಿ, “ನಮ್ಮ ಜೀವನದ ವ್ಯವಸ್ಥೆಯಲ್ಲಿ ಬಾಲ್ಯದ ಶಾಲಾ ಜೀವನವೇ ಅಮೂಲ್ಯವಾದದ್ದು. ಭವಿಷ್ಯ ನಿರ್ಮಾಣ ಮಾಡುವ ಈ ಹಂತದಲ್ಲಿ ಸಂಸ್ಕಾರ ಭರಿತ ಶಿಕ್ಷಣ, ಶಿಕ್ಷಕರು ಹಾಗೂ ಹಿರಿಯರ ಮೌಲ್ಯಯುತ ಹಿತನುಡಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸುತ್ತವೆ. ಮಳೆ ಹಬ್ಬದಂತಹ ಪಠ್ಯಪೂರಕ ಶಿಬಿರಗಳು ವಿದ್ಯಾರ್ಥಿಗಳ ಕಲಿಕಾ ಚೈತನ್ಯವನ್ನು ಇಮ್ಮಡಿಗೊಳಿಸುತ್ತವೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ (SDMC) ಅಧ್ಯಕ್ಷರಾದ ಶಿವಶಂಕರ ರಾವ್ ಮಾತನಾಡಿ, “ಶಾಲೆಯ ವಿಶೇಷ ಕಾರ್ಯಕ್ರಮವಾದ ಮಳೆ ಹಬ್ಬವು ವಿದ್ಯಾರ್ಥಿಗಳಲ್ಲಿ ಸಂತಸ ಮತ್ತು ಸಂಭ್ರಮವನ್ನು ಮೂಡಿಸುವುದರ ಜೊತೆಗೆ, ಅವರು ಕಲಿಕೆಯಲ್ಲಿ ಸುಲಭವಾಗಿ ತೊಡಗಿಕೊಳ್ಳಲು ಸೂಕ್ತ ವಾತಾವರಣ ನಿರ್ಮಿಸಿದೆ” ಎಂದು ಶ್ಲಾಘಿಸಿದರು.

ಒಟ್ಟು ಮೂರು ದಿನಗಳ ಕಾಲ ನಡೆದ ಈ ಮಳೆಹಬ್ಬದಲ್ಲಿ ಶಾಲೆಯ ಅಂದಾಜು 300 ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಭಾಗವಹಿಸಿದ್ದರು. ವಿವಿಧ ರಂಗದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಜ್ಞಾನದ ಬುತ್ತಿಯನ್ನು ಉಣಬಡಿಸಿದರು.ಮಕ್ಕಳ ರಂಗಭೂಮಿ ಕಲಾವಿದ ಕೃಷ್ಣಪ್ಪ ಬಂಬಿಲ ಅವರು ಜಾಗೃತಿ ಹಾಡುಗಳು ಮತ್ತು ವಿವಿಧ ವೈವಿಧ್ಯಮಯ ಚಪ್ಪಾಳೆಗಳ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಂಭ್ರಮಿಸಿದರು. ‘ಕತ್ತಲೆ ಹಾಡು’ ಖ್ಯಾತಿಯ ನಾದ ಮಣಿನಾಲ್ಕೂರು ಅವರು ಸುಂದರ ಹಾಡುಗಳು ಹಾಗೂ ಪ್ರಸಕ್ತ ಬದುಕಿನ ರೋಚಕ ಘಟನೆಗಳನ್ನು ಹೆಣೆಯುತ್ತಾ, ವಿದ್ಯಾರ್ಥಿಗಳಲ್ಲಿ ಸಾಧನೆ ಮತ್ತು ಸಾಧ್ಯತೆಗಳ ಕುರಿತು ಅರಿವಿನ ಬೆಳಕು ಚೆಲ್ಲಿದರು. ಹಸಿರು ದಳದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಬಜಾಲ್ ಅವರು ಪರಿಸರ ತ್ಯಾಜ್ಯ ಮತ್ತು ಅದರ ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ನೀಡಿ, ಮನೆಯೊಳಗಿನ ಕಸ ವಿಲೇವಾರಿ ಹಾಗೂ ಪರಿಸರದ ಜೊತೆಗಿನ ನಮ್ಮ ನಿಲುವನ್ನು ಬಲಪಡಿಸುವ ಬಗ್ಗೆ ತಿಳಿಸಿಕೊಟ್ಟರು.
ಇದನ್ನೂ ಓದಿ: ಅಂಬಿಕಾ ವಿದ್ಯಾಲಯ: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು: ಉಲ್ಲಾಸ್ ಕೆ.
ಪ್ರಕೃತಿಯ ಉಳಿವಿನಲ್ಲಿ ನಮ್ಮ ಪಾತ್ರದ ಅಗತ್ಯತೆಯನ್ನು ಪ್ರತಿಬಿಂಬಿಸುವ ‘ನೀರು-ಬೇರು’ ವಿಷಯದ ಕುರಿತು ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ರಮೇಶ್ ಬಾಯಾರು ಅವರು ಸಣ್ಣ ಸಣ್ಣ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರಕೃತಿ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸಿದರು. ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕ ರಮೇಶ್ ರಾವ್ ನೂಜಿಪ್ಪಾಡಿ, ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಶಿಕ್ಷಕಿ ದೇವಕಿ ಎಚ್, ಮತ್ತು ನಿವೃತ್ತ ಶಿಕ್ಷಕಿ ಅನುಸೂಯ ರಾವ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಭಾಷಾ ಶಿಕ್ಷಕಿ ಶಾಂತ ಎಸ್ ಸ್ವಾಗತಿಸಿ, ಕಲಾ ಶಿಕ್ಷಕ ಜಗನ್ನಾಥ್ ವಂದಿಸಿದರು. ಚಿತ್ರಕಲಾವಿದ ತಾರಾನಾಥ ಕೈರಂಗಳ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿ, ನಿರೂಪಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


