ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ೨೦ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 35 ರನ್ಗಳ ಭರ್ಜರಿ ಜಯ ಸಾಧಿಸಿ, ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ 192 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಕೇವಲ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 81 ರನ್ಗಳ ಸಿಡಿಲಾಟ ನಡೆಸಿ ತಂಡದ ಭದ್ರ ಅಡಿಪಾಯ ಹಾಕಿದರು.
ಇತರ ಬ್ಯಾಟರ್ಗಳ ಪೈಕಿ ಇಶಾನ್ ಕಿಶನ್ 29, ಶ್ರೇಯಸ್ ಅಯ್ಯರ್ 27, ರಿಂಕು ಸಿಂಗ್ 25, ತಿಲಕ್ ವರ್ಮಾ 11 ಹಾಗೂ ಅಭಿಷೇಕ್ ಶರ್ಮಾ 2 ರನ್ ಗಳಿಸಿದರು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ 2 ವಿಕೆಟ್ ಪಡೆದರೆ, ಸಿಕಂದರ್ ರಝಾ, ಬ್ಲೆಸ್ಸಿಂಗ್ ಮುಜರಬಾನಿ ಹಾಗೂ ವೆಸ್ಲಿ ಮಧೆವೆರೆ ತಲಾ 1 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: T20: ಹರಾರೆಯಲ್ಲಿ ಟೀಂ ಇಂಡಿಯಾದ ಅಬ್ಬರ: ಜಿಂಬಾಬ್ವೆ ವಿರುದ್ಧ 90 ರನ್ಗಳ ಗೆಲುವು
193 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ, ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ಗಳಿಗೆ ತನ್ನ ಹೋರಾಟವನ್ನು ಮುಗಿಸಿತು.
ಜಿಂಬಾಬ್ವೆ ಪರ ರಯಾನ್ ಬರ್ಲ್ ಅಜೇಯ 54 ರನ್ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದರು. ವೆಸ್ಲಿ ಮಧೆವೆರೆ 28, ಬೆನ್ ಕರನ್ 20, ಡಿಯೋನ್ ಮೈಯರ್ಸ್ 19, ಬ್ರಾಡ್ ಇವಾನ್ಸ್ 14, ತಡಿವನಾಶೆ ಮರುಮಾನಿ 1 ಹಾಗೂ ನ್ಯೂಮನ್ ನ್ಯಾಮಹುರಿ ಅಜೇಯ 1 ರನ್ ಗಳಿಸಿದರು.
ಭಾರತದ ಬೌಲರ್ಗಳ ಪೈಕಿ ಮಯಾಂಕ್ ಅಗರ್ವಾಲ್ 3 ವಿಕೆಟ್ ಪಡೆದು ಮಿಂಚಿದರೆ, ಯಶ್ ಠಾಕೂರ್ 2 ವಿಕೆಟ್ ಕಬಳಿಸಿದರು. ಅಶೋಕ್ ಶರ್ಮಾ ಹಾಗೂ ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದು ಜಿಂಬಾಬ್ವೆಯ ಬ್ಯಾಟಿಂಗ್ನ್ನು ನಿಯಂತ್ರಿಸಿದರು.
ಈ ಗೆಲುವಿನೊಂದಿಗೆ ಭಾರತ ತಂಡ ಸರಣಿಯ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿ, 3-0 ಅಂತರದಿಂದ ಜಿಂಬಾಬ್ವೆಯನ್ನು ವೈಟ್ವಾಶ್ ಮಾಡುವ ಮೂಲಕ ಟಿ೨೦ ಸರಣಿಯನ್ನು ತನ್ನದಾಗಿಸಿಕೊಂಡಿತು.

